ಪಾವಗಡ:
ಬೇಸಿಗೆ ಕಾಲ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಬೇಸಿಗೆ ಆರಂಭಕ್ಕೂ ಮುನ್ನವೇ ಪಾವಗಡದಲ್ಲಿ ರಣಬಿಸಿಲು ಆರಂಭವಾಗಿದೆ. ಇದ್ರಿಂದ ಪ್ರಾಣಿ, ಪಕ್ಷಿಗಳು ಮಾತ್ರವಲ್ಲದೇ ರೈತರು ಕಂಗಾಲಾಗಿದ್ದಾರೆ. ಹೌದು ರಣ ಬಿಸಿಲಿನಿಂದ ರೈತರು ಬೆಳೆದ ಬೆಳೆಗಳು ಅತಿ ಬೇಗ ಒಣಗುತ್ತಿರೋದು ಒಂದ್ಕಡೆ ಆದ್ರೆ, ಮತ್ತೋಂದ್ಕಡೆ ಹೂಗಳು ಕೂಡ ಬಹು ಬೇಗ ಬಾಡಿ ಹೋಗುತ್ತಿವೆ. ಇದ್ರಿಂದ ಹೂಗಳ ದರ ಕೂಡ ಕುಸಿತ ಉಂಟಾಗಿದ್ದು, ಹೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಗಡಿ ತಾಲೂಕು ಪಾವಗಡದಲ್ಲಿ ಹೂವಿನ ದರ ಕುಂಠಿತವಾಗಿದ್ದು, ಸರ್ಕಾರ ಕೂಡ ಬೆಂಬಲ ಬೆಲೆ ಕೊಡದಿರೋದ್ರಿಂದ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಬಗೆ ಬಗೆಯ ಹೂವುಗಳನ್ನು ಉತ್ತಮವಾಗಿ ಬೆಳೆದು ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಇದೆ. ಇದ್ರಿಂದ ಪಾವಗಡದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದು ಒಂದ್ಕಡೆ ಆದ್ರೆ ಮತ್ತೊಂದ್ಕಡೆ ಬೆಳೆ ಇಡಲು ನೀರಿಗೂ ಪರದಾಡುವ ಪರಿಸ್ಥಿತಿ ಇದ್ದು, ಪಾವಗಡದ ಹೂ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.
ಹೇಗೋ ಕಷ್ಟ ಪಟ್ಟು ಸಾಲ ಸೋಲ ಮಾಡಿ ಹೂಗಳನ್ನು ಬೆಳೆದು ಜೀವನ ಕಟ್ಟಿಕೊಳ್ಳಲು ರೈತರು ಮುಂದಾಗಿದ್ದು, ಬೆಳೆಗೆ ದುಬಾರಿ ಬೆಲೆಯ ಔಷಧಿ, ರಸಗೊಬ್ಬರ ಹಾಕಿ ಸಮೃದ್ದ ಬೆಳೆಯನ್ನು ಬೆಳೆದ್ರೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಕೂಡ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಪಾವಗಡದಲ್ಲಿ ಹೂ ಮಾರಾಟಕ್ಕೆ ಸೂಕ್ತವದ ಮಾರುಕಟ್ಟೆಯ ಕೊರತೆ ಇದ್ದು, ರಸ್ತೆ ಮಧ್ಯೆಯೇ ಮಾರಾಟ ಮಾಡುವ ದುಸ್ಥಿತಿ ಇದೆ. ಜೊತೆಗೆ ಹೂಗಳನ್ನು ಬೇರೆ ಬೇರೆ ಕಡೆಗೆ ಸಾಗಿಸುವಾಗ ಅಪಘಾತಗಳು ಸಂಭವಿಸಿ ರೈತರು ಸಾವನ್ನಪ್ಪಿದ್ರೆ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆಯಿಂದ ಮೃತ ರೈತರ ಕುಟುಂಬಕ್ಕೆ ಯಾವುದೇ ಪರಿಹಾರ ನೀಡುತ್ತಿಲ್ಲ. ಹೀಗಾಗಿ ಸರ್ಕಾರ ಮಧ್ಯಸ್ಥಿತಿ ವಹಿಸಿ ಹೂ ಬೆಳೆಗಾರರ ಬೆಂಬಲಕ್ಕೆ ನಿಲ್ಲಬೇಕಿದೆ ಅನ್ನೋದು ರೈತರ ಆಗ್ರಹವಾಗಿದೆ.