ಗುಬ್ಬಿ :
ರೈತನೋರ್ವ ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ಗಿಡಗಳನ್ನು ನಾಶ ಮಾಡಿದ್ದು, ಅನ್ನದಾತ ಕಂಗಲಾಗಿದ್ದಾನೆ. ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ತಿರುಮಲಯ್ಯ ಎಂಬುವರಿಗೆ ಸೇರಿದ ಅಡಿಕೆ ಮರಗಳನ್ನು ಕಿಡಿಗೇಡಿಗಳು ರಾತ್ರೋ ರಾತ್ರಿ ಕತ್ತರಿಸಿದ್ದಾರೆ. ಬೆಳಗ್ಗೆ ತೋಟಕ್ಕೆ ಬಂದಾಗ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ. ಇನ್ನು ಅಡಿಕೆ ಗಿಡಗಳು ಸಮೃದ್ದವಾಗಿ ಬೆಳೆದಿದ್ದು, ಲಕ್ಷಾಂತರ ರೂಪಾಯಿ ವರಮಾನವನ್ನು ತಂದು ಕೊಡುತ್ತಿತ್ತು. ಆದರೆ ರಾತ್ರೋ ರಾತ್ರಿ ಬಂದ ಕಿಡಿಗೇಡಿಗಳು ಅಡಿಕೆ ಮರಗಳನ್ನು ನಾಶ ಮಾಡಿ ಹೋಗಿದ್ದಾರೆ. ಇದರಿಂದ ರೈತನ ಕುಟುಂಬ ಕಂಗಲಾಗಿದ್ದಾರೆ.
ಇನ್ನು ರೈತ ತಿರುಮಲಯ್ಯ ಮಾತನಾಡಿ ಜಮೀನು ಅಭಿವೃದ್ದಿ ಪಡಿಸಲು 4 ಲಕ್ಷ ಸಾಲ ಮಾಡಿ ಸಹೋದರನ ಸಹಾಯ ಪಡೆದು ಬೋರ್ ವೆಲ್ ಹಾಕಿದ್ದು, ಅಡಿಕೆ ಗಿಡಗಳನ್ನ ಮಕ್ಕಳ ರೀತಿ ಸಾಕಿದ್ದೆ , ಆದರೆ ಇದನ್ನು ಸಹಿಸದ ಕಿಡಿಗೇಡಿಗಳು ಈ ಹಿಂದೆ ಸಹ ತರಕಾರಿ ಬೆಳೆದಿದ್ದಾಗ ಇಂತಹದ್ದೇ ಕೃತ್ಯ ನಡೆದಿದ್ದು, ಮತ್ತೇ ಅದೇ ಚಾಳಿ ಮುಂದುವರಿಸಿದ್ದು ನನ್ನ ಬದುಕಿಗೆ ಕೊಡಲಿ ಏಟು ನೀಡಿದ್ದಾರೆ ಎಂದು ಕಣ್ಣೀರು ಹಾಕಿದರು.
ಇನ್ನು ಜಮೀನಿನಲ್ಲಿ ಸೊಗಸಾಗಿ ಬೆಳೆದಿದ್ದ ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ, ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಬಂಧಿಸುವಂತೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಹಾಗೂ ಪೋಲಿಸರ ಬಳಿ ರೈತ ತಮ್ಮ ಅಳಲನ್ನು ತೋಡಿಕೊಂಡರು. ಅಲ್ಲದೇ ಬೆಳೆ ನಾಶಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.