ಬೆಂಗಳೂರು : ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ನಡೆದ ಒಂದು ಭಾಷಾ ವಿವಾದ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಶಾಖೆಯ ಮಹಿಳಾ ಮ್ಯಾನೇಜರ್ "ನಾನು ಕನ್ನಡ ಮಾತನಾಡಲ್ಲ, ಇದು ಭಾರತ, ಹಿಂದಿಯಲ್ಲಿ ಮಾತನಾಡುತ್ತೇನೆ" ಎಂದು ಗ್ರಾಹಕರೊಂದಿಗೆ ದರ್ಪದಿಂದ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಕೆರಳಿಕೆಗೆ ಕಾರಣವಾಯಿತು. ಅಲ್ಲದೇ ಆತ ದರ್ಪದಿಂದ ಮಾತಾಡಿರೋ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಂತೆ ಪ್ರತಿಭಟನೆಯ ಭೀತಿಯಿಂದ ಬ್ಯಾಂಕ್ ಮ್ಯಾನೇಜರ್ ಕ್ಷಮೆ ಕೇಳಿದ್ದರು.
ಆದ್ರೇ ಇದೀಗ ಕನ್ನಡ ಮಾತಾಡಲ್ಲ ಎಂದಿದ್ದ ಬ್ಯಾಂಕ್ ಮ್ಯಾನೇಜರ್ ನಡೆ ಬಗ್ಗೆ ಸಿಎಂ ಮುಖ್ಯಮಂತ್ರಿ ಖಂಡನೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳು ಜನರ ಜೊತೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬೇಕು. ಎಸ್‌ಬಿಐ ಶಾಖಾ ವ್ಯವಸ್ಥಾಪಕರು ಕನ್ನಡ ನಿರಾಕರಿಸಿ ನಾಗರಿಕರನ್ನು ಕಡೆಗಣಿಸಿರುವುದು ತೀವ್ರವಾಗಿ ಖಂಡನೀಯ. ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಎಸ್‌ಬಿಐನ ತ್ವರಿತ ಕ್ರಮವನ್ನು ಪ್ರಶಂಸಿಸುತ್ತೇವೆ. ಅಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನ ಘನತೆಯಿಂದ ನಡೆಸಿಕೊಳ್ಳಬೇಕು. ಗ್ರಾಹಕರ ಜೊತೆ ಸ್ಥಳೀಯ ಭಾಷೆಯಲ್ಲಿ ಮಾತನಾಡುವ ಪ್ರಯತ್ನ ಮಾಡಬೇಕು. ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿ ಕಡ್ಡಾಯಗೊಳಿಸಬೇಕು. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದು ಎಂದರ್ಥ ಎಂದು ಹೇಳುತ್ತಾ ಕೇಂದ್ರದ ಹಣಕಾಸ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕನ್ನಡಪರ ಸಂಘಟನೆಗಳು SBI ಹೆಡ್ ಆಫೀಸ್ ಜನರಲ್ ಮ್ಯಾನೇಜರ್ ಸುಶೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಇದೀಗ ಅವರ ಮನವಿಯನ್ನು ಸ್ವೀಕರಿಸಿದ ಅವರು ಬ್ಯಾಂಕ್ ಮ್ಯಾನೇಜರ್ ವರ್ಗಾವಣೆ ಮಾಡಿದ್ದಾರೆ.