ಶಿರಾ :
ಗ್ರಾಮ ಅಭಿವೃದ್ಧಿ ಆದರೆ ಮಾತ್ರ ದೇಶದ ಅಭಿವೃದ್ಧಿ ಆಗುತ್ತದೆ. ನೇರವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯಗಳು ಗ್ರಾಮ ಪಂಚಾಯಿತಿ ಮೂಲಕ ಸಿಗಬೇಕು. ಗ್ರಾಮ ಪಂಚಾಯಿತಿಗೆ ಸುಸಜ್ಜಿತ ಕಟ್ಟಡ ಇಲ್ಲದಿರುವ ಬಗ್ಗೆ ಗ್ರಾಮಸ್ಥರಲ್ಲಿ ಕೊರಗು ಇತ್ತು. ಅದು ಈಗ ನಿವಾರಣೆಯಾಗಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಶಿರಾ ಶಾಸಕ ಡಾ.ಟಿ.ಬಿ. ಜಯಚಂದ್ರ ತಿಳಿಸಿದರು.
ಶಿರಾ ತಾಲ್ಲೂಕಿನ ರತ್ನಸಂದ್ರ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 15 ನೇ ಹಣಕಾಸು ಹಾಗೂ ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ ಬಳಸಿಕೊಂಡು ಸುಮಾರು 75 ಲಕ್ಷ ರೂ. ಅನುದಾನದಲ್ಲಿ ಸುಂದರವಾಗಿ, ಸುಸಜ್ಜಿತ ರೀತಿಯಲ್ಲಿ, ಹೈ–ಟೆಕ್ ಸ್ಪರ್ಶ ನೀಡಿರುವ ಹಾಗೂ ಸಕಲ ಸೌಲಭ್ಯವುಳ್ಳ ಭವ್ಯವಾದ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣವಾಗಿದೆ ಎಂದರು.
ನಂತರ ಶಿರಾ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ 22 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ಕಾಮಗಾರಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಸಿಇಓ ಪ್ರಭು ಜಿ, ತಾಲೂಕು ಪಂಚಾಯ್ತಿ ಇಓ ಹರೀಶ್ ಆರ್, ರತ್ನಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಿಂಗಮ್ಮ, ಶ್ರೀರಂಗಪ್ಪ ಸೇರಿದಂತೆ ಸದಸ್ಯರು ವಿವಿಧ ಮುಖಂಡರು ಉಪಸ್ಥಿತರಿದ್ದರು.