ಶಿರಾ :
ಕಳೆದ ಒಂದೂವರೆ ಎರಡು ತಿಂಗಳಿನಿಂದ ತುಮಕೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣಗಳ ತೀರ್ಪನ್ನು ನ್ಯಾಯಾಲಯ ಪ್ರಕಟಿಸುತ್ತಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸುವ ಮೂಲಕ, ಅಪರಾಧ ಕೃತ್ಯಗಳಿಗೆ ಎಸಗುವವರಿಗೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಈಗ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದ ತೀರ್ಪನ್ನು ನೀಡಲಾಗಿದ್ದು, ಅತ್ಯಾಚಾರ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷದ 50 ಸಾವಿರ ಹಣವನ್ನು ದಂಡ ಕಟ್ಟುವಂತೆ ತುಮಕೂರು ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
2023ರ ಜೂನ್ 12ರಂದು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ನೊಂದ ಬಾಲಕಿಯ ತಾಯಿ ಪೋಕ್ಸೋ ಪ್ರಕರಣವನ್ನು ದಾಖಲಿಸಿದ್ದರು. ಪ್ರಕರಣವನ್ನು ತನಿಖೆ ಕೈಗೊಂಡ ಶಿರಾ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ರಾಘವೇಂದ್ರ ಅವರು ಆರೋಪಿ ಗುಣಯ್ಯ ಬಿನ್ ಕರೆಕೆಂಚಪ್ಪ ಅವರನ್ನು ದಸ್ತಗಿರಿ ಮಾಡಿದ್ದರು. ತನಿಖೆಯನ್ನು ಪೂರ್ಣಗೊಳಿಸಿ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಸದರಿ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಶುಕ್ರವಾರ ಆರೋಪಿ ಗುಣಯ್ಯಗೆ 20 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷದ 50 ಸಾವಿರ ದಂಡ ವಿಧಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ.
ತುಮಕೂರಿನ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣ, ಅತ್ಯಾಚಾರ ಪ್ರಕರಣಗಳನ್ನು ಶೀಘ್ರವೇ ಶಿಕ್ಷಿ ವಿಧಿಸಿ ತೀರ್ಪು ಪ್ರಕಟಿಸುತ್ತಿದೆ. ಪೋಕ್ಸೋ ಹಾಗೂ ಅತ್ಯಾಚಾರಗಳಂತಹ ಪ್ರಕರಣಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಶಿಕ್ಷೆಯನ್ನು ವಿಧಿಸ್ತಾ ಇದ್ದು, ಅಪರಾಧ ಕೃತ್ಯಗಳಿಗೆ ಕೈ ಹಾಕುವ ಆರೋಪಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.