ಶಿರಾ : ಪಟ್ಟಣ ಪಂಚಾಯಿತಿ ಆಗಲಿ, ನಗರಸಭೆಯಾಗಲಿ, ಮಹಾನಗರ ಪಾಲಿಕೆಯೇ ಆಗಲಿ, ಇಲ್ಲಿ ಮಾಜಿ ಅಧ್ಯಕ್ಷರು ಮತ್ತು ಮಾಜಿ ಉಪಾಧ್ಯಕ್ಷರು ಒಂದೇ ಪಕ್ಷದವರಾದರೇ ಅಕ್ರಮಗಳನ್ನು ಮುಚ್ಚಿ ಹಾಕಲು ನೋಡುತ್ತಾರೆ ಹಾಲಿಗಳು. ಆದರೆ ಇಲ್ಲೊಬ್ಬ ಹಾಲಿ ಅಧ್ಯಕ್ಷ ಮಾಡಿರುವ ಕೆಲಸದಿಂದಾಗಿ ಕೋಟ್ಯಾಂತರ ಬೆಲೆ ಬಾಳುವ ನಗರಸಭೆಯ ಸ್ವತ್ತು ಭೂಗಳ್ಳರಿಂದ ಮತ್ತೆ ನಗರಸಭೆ ಕೈ ಸೇರಿರುವ ಘಟನೆ ನಡೆದಿದೆ.
ಶಿರಾದಲ್ಲಿ ಸಾರ್ವಜನಿಕರ ಸ್ವತ್ತಿನ ವಿಚಾರದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಮಾಡಿದ್ದ ಭೂ ಹಗರಣಕ್ಕೆ ಹಾಲಿ ನಗರಸಭೆ ಅಧ್ಯಕ್ಷ ಇತೀಶ್ರೀ ಹಾಡಿದ್ದಾರೆ. ಈ ಮೂಲಕ ಕೋಟಿ ಕೋಟಿ ಬೆಲೆ ಬಾಳುವ ಸರ್ಕಾರಿ ಸ್ವತ್ತನ್ನು ಮತ್ತೆ ನಗರಸಭೆಗೆ ನೀಡಿದ್ದಾರೆ. ಹಾಲಿ ಅಧ್ಯಕ್ಷರ ಕಾರ್ಯವೈಖರಿಗೆ ಶಿರಾ ನಾಗರೀಕರು ಅಭಿನಂದನೆ ಸಲ್ಲಿಸಿದ್ದಾರೆ.
ಶಿರಾದಲ್ಲಿ ಸರ್ವೇ ನಂ.35/2 ರಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದ ಭೂಪ್ರದೇಶವನ್ನು ನಿಯಮ ಬಾಹೀರವಾಗಿ ಅಕ್ರಮ ಖಾತೆ ಮಾಡಿಸಿಕೊಂಡಿದ್ದರು. ಸದರಿ ಜಾಗವನ್ನು ಸಂರಕ್ಷಿಸಿ ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು ಎಂದು ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಡಳಿತ ಸಮಗ್ರವಾಗಿ ಕಡತ ಪರಿಶೀಲನೆ ಮಾಡಿ, ಸದರಿ ಸ್ವತ್ತು ನಗರಸಭಾ ಸ್ವತ್ತು ಎಂಬುದನ್ನು ಖಚಿತಪಡಿಸಿಕೊಂಡಿದೆ. ಇತ್ತ ಅಕ್ರಮವಾಗಿ ಭೂಮಿ ಹೊಡೆಯಲು ಮುಂದಾಗಿದ್ದವರಿಗೆ ಕಾನೂನು ಚಾಟಿ ಬೀಸಿದೆ.
ಸರ್ವೇ ನಂಬರ್ 35/2 ರಲ್ಲಿನ ಜಮೀನಿನಲ್ಲಿ ಶೇಕ್ ಸಿಕಂದರ್ ಲೇಔಟ್ ನಿರ್ಮಾಣವಾಗಿತ್ತು. ಆ ಸಮಯದಲ್ಲಿ ನಿಯಮಾನುಸಾರ ನಿವೇಶನಗಳನ್ನು ವಿಂಗಡಿಸಿ ಸಾರ್ವಜನಿಕ ಉದ್ದೇಶಕ್ಕಾಗಿ ಅಂದಿನ ಪುರಸಭೆ 40*120 ಅಡಿ ಅಳತೆಯ ಜಾಗವನ್ನು ಮೀಸಲಿಡಲಾಗಿತ್ತು. ಹೀಗಿರುವಾಗ ಸದರಿ ಜಾಗವನ್ನು ಅಂದಿನ ಪುರಸಭೆ ಆಡಳಿತದಲ್ಲಿ ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು 30*40 ಅಡಿ ಅಳತೆಯ ನಾಲ್ಕು ನಿವೇಶನಗಳಾಗಿ ವಿಂಗಡಿಸಿ, ಅಮಾನುಲ್ಲಾಖಾನ್ ಬಿನ್ ಖಾಸೀಂ ಖಾನ್, ಶೇಕ್ ಸಿಖಂದರ್ ಹುಸೇನ್, ಮೈಲಾರಿ ರಾವ್ ಹಾಗೂ ಬಿ ಸಿ ಸುಧಾಕರ್ ಹೆಸರಿಗೆ ಸದರಿ ನಿವೇಶನಗಳನ್ನು ಕೇವಲ ತಲಾ ನಾಲ್ಕು ರೂಪಾಯಿ ಕಿಮ್ಮತ್ತು ಕಟ್ಟಿಸಿಕೊಂಡು ಪುರಸಭೆ ಜಾಗವನ್ನು ನಿವೇಶನಗಳಾಗಿ ನೀಡಲಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಭೂ ಪ್ರದೇಶ ಯಾವುದೇ ಇರಲಿ ಅದು ರಾಜ್ಯಪಾಲರ ಹೆಸರಿಗೆ ಸೇರಿರುತ್ತದೆ. 2011ರಲ್ಲಿಯೇ ನಗರಸಭೆ ಭೂ ಹಗರಣ ಬಗ್ಗೆ ಮಾದ್ಯಮಗಳಲ್ಲಿ ಸುದ್ದಿ ಬಿತ್ತರಗೊಂಡಿತ್ತು. ಅದರ ಪರಿಣಾಮ ಇಲಾಖಾ ತನಿಖೆ ನಡೆದು ಸದರಿ ಸ್ವತ್ತು ಸರ್ಕಾರಕ್ಕೆ ಸೇರಿದ್ದು ಎಂದು ಭಾವಿಸಿ ಈ ನಾಲ್ಕು ನಿವೇಶನಗಳ ಖಾತೆಗಳನ್ನು ಅಮಾನತ್ತಿನಲ್ಲಿಡುವಂತೆ ಆದೇಶ ಹೊರಡಿಸಿತ್ತು. ಇತ್ತೀಚೆಗೆ ನಗರಸಭೆಯಲ್ಲಿ ಈ ಖಾತೆಯ ಪ್ರಕ್ರಿಯೆ ಪ್ರಾರಂಭವಾದ ಮೇಲೆ ಎಚ್ಚೆತ್ತುಕೊಂಡ ಕೆಲವು ಭೂಗಳ್ಳರು, ಸದರಿ ಸ್ವತ್ತುಗಳನ್ನು ಈ ಖಾತೆ ಮಾಡಿಸಿಕೊಳ್ಳುವ ಉದ್ದೇಶಕ್ಕಾಗಿ ಗಿಡಗೆಂಟೆ ಬೆಳೆದು ತಗ್ಗು ಪ್ರದೇಶವಾಗಿದ್ದ ನಿವೇಶನಕ್ಕೆ ಅಕ್ರಮವಾಗಿ ಮಣ್ಣನ್ನು ಹಾಕಿಸಿ, ಸಮತಟ್ಟು ಮಾಡಿಸಿದ್ದ ಪರಿಣಾಮ ಮತ್ತೆ ಈ ಪ್ರಕರಣ ಮಾಧ್ಯಮದಲ್ಲಿ ಸುದ್ದಿಯಾಗಿತ್ತು.
ಈ ವಿಚಾರವಾಗಿ ಲೋಕಾಯುಕ್ತರವರೆಗೆ ದೂರು ಹೋದ ಪರಿಣಾಮ, ಹಾಲಿ ಅಡಳಿತ ಕೂಲಂಕುಶವಾಗಿ ಪರಿಶೀಲನೆ ನಡೆಸಿ, ಅಳತೆ ಮಾಡಿಸಿ ಸದರಿ ಜಾಗವು ನಗರಸಭೆ ಸ್ವತ್ತು ಎಂದು ನಾಮಫಲಕ ಹಾಕುವ ಮೂಲಕ 14 ವರ್ಷಗಳ ಅಜ್ಞಾತವಾಸದಲ್ಲಿದ್ದ ಭೂ ಹಗರಣಕ್ಕೆ ಅಂತ್ಯ ಕಾಣಿಸಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಪಕ್ಷದ ಮಾಜಿ ನಗರಸಭೆ ಅಧ್ಯಕ್ಷನ ನಿವೇಶದ ಆಟಕ್ಕೆ ಹಾಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಅಡಳಿತದಲ್ಲಿ ಬ್ರೇಕ್ ಬಿದ್ದಂತಾಗಿದೆ. ಇನ್ನು ಹಾಲಿ ಅಧ್ಯಕ್ಷರಾದ ಜಿಶಾನ್ ಅಹಮದ್ ಅವರಿಗೆ ಈ ಬಗ್ಗೆ ಮಾಹಿತಿ ಕೇಳಿದಾಗ, ಈ ಸ್ವತ್ತಿನ ವಿಚಾರವಾಗಿ ಮತ್ತಷ್ಟು ಮಾಹಿತಿ ಹೊರಬರಬೇಕಿದೆ ಎಂದಿದ್ದರು. ಆದರೆ ಇಂದು ಆ ಸ್ಥಳದಲ್ಲಿ ವರದಿ ಮಾಡುವಾಗ ಬಂದ ಅಧ್ಯಕ್ಷರು ಕ್ಯಾಮೆರಾ ಕಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ.