ಶಿರಾ :
ಸರ್ಕಾರಿ ಶಾಲೆಯಲ್ಲಿ ಎಷ್ಟೇ ಗುಣಮಟ್ಟದ ಶಿಕ್ಷಣ ನೀಡಿದರೂ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಮುಂದಾಗ್ತಾರೆ. ಅಷ್ಟೇ ಅಲ್ಲ ಇಂಗ್ಲೀಷ್ ಮೀಡಿಯಂನಲ್ಲೇ ತಮ್ಮ ಮಕ್ಕಳು ಓದಬೇಕು, ಜೊತೆಗೆ ರೆಪಿಟೇಷನ್ ದೃಷ್ಟಿಯಿಂದ ಸಾಲ ಸೋಲ ಆದರೂ ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಸ್ಕೂಲ್‌ಗೆ ಸೇರಿಸೋದರಿಂದ ಸರ್ಕಾರಿ ಶಾಲೆಗಳು ಒಂದೊಂದೇ ಬಾಗಿಲು ಹಾಕಿಕೊಳ್ಳುತ್ತಿವೆ. ಆದರೆ ಇಲ್ಲೊಂದು ಮುಚ್ಚುತ್ತಿದ್ದ ಸರ್ಕಾರಿ ಶಾಲೆ ಓರ್ವ ವಿದ್ಯಾರ್ಥಿನಿಯಿಂದ ಉಳಿದಿದೆ. ಹೌದು ಇಂತಹ ಘಟನೆಗೆ ಸಾಕ್ಷಿಯಾಗಿದ್ದು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದ್ದೇವಳ್ಳಿಯಲ್ಲಿ.
ಶಿರಾ ತಾಲೂಕಿನ ಮದ್ದೇವಳ್ಳಿಯ ಸರ್ಕಾರಿ ಶಾಲೆಯಲ್ಲಿ ಸುಸಜ್ಜಿತವಾದ ಕಟ್ಟಡ ಸೇರಿ ಎಲ್ಲಾ ಮೂಲಭೂತ ಸೌಕರ್ಯಗಳು ಇವೆ. ಆದರೆ ಊರಿನಲ್ಲಿರೋ ಮಕ್ಕಳನ್ನೆಲ್ಲಾ ಖಾಸಗಿ ಶಾಲೆಗೆ ಸೇರಿಸಲಾಗಿತ್ತು. ಒಂದನೇ ತರಗತಿಗೆ ಒಬ್ಬಳೇ ವಿದ್ಯಾರ್ಥಿನಿ ದಾಖಲಾಗಿದ್ದರೆ, 2 ರಿಂದ 5ನೇ ತರಗತಿವರೆಗೂ ಒಬ್ಬರೇ ಒಬ್ಬ ವಿದ್ಯಾರ್ಥಿ ದಾಖಲಾಗಿರಲಿಲ್ಲ, ಹೀಗಾಗಿ ಓರ್ವ ವಿದ್ಯಾರ್ಥಿನಿಗಾಗಿ ಈಗ ಶಾಲೆ ನಡೆಯುತ್ತಿದ್ದು, ಓರ್ವ ವಿದ್ಯಾರ್ಥಿನಿಗೆ ಪಾಠ ಮಾಡಲು ಓರ್ವ ಶಿಕ್ಷಕಿ, ಬಿಸಿಯೂಟಕ್ಕೆ ಓರ್ವ ಅಡುಗೆ ತಯಾರಕಿ ಕೆಲಸ ಮಾಡ್ತಿದ್ದಾರೆ. ಆಟವಾಡಲು, ಮಾತನಾಡಲು ಸಹ ಸಹಪಾಠಿ ಇಲ್ಲದೆ ಒಂಟಿಯಾಗಿ ಮಾನಸ ಎಂಬ ವಿದ್ಯಾರ್ಥಿನಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಕೊರೊನಾ ಸಮಯದಲ್ಲಿ ಶಾಲೆಯಲ್ಲಿ 10 ಮಕ್ಕಳು ವ್ಯಾಸಾಂಗ ಮಾಡ್ತಾ ಇದ್ದು, ನಂತರದ ದಿನಗಳಲ್ಲಿ ಶಾಲೆ ದಾಖಲಾತಿ ಹೆಚ್ಚಿಸಬೇಕೆಂಬ ಉದ್ದೇಶವನ್ನು ಶಿಕ್ಷಕಿ ಪದ್ಮ ಅವರದ್ದಾಗಿತ್ತು, ಆದರೆ ಕೊರೊನಾ ನಂತರ ಗ್ರಾಮದ 8ರಿಂದ 10 ಮಕ್ಕಳು ಮತ್ತೆ ಖಾಸಗಿ ಶಾಲೆಗೆ ದಾಖಲಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಮಕ್ಕಳು ದಾಖಲಾಗಿಲ್ಲ. ಕಳೆದ ಎರಡು ವರ್ಷದಿಂದ ಮೂವರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ದಾಖಲಾಗಿದ್ದರು, ಆದರೆ ಈ ವರ್ಷ ಕೇವಲ ಒಬ್ಬ ವಿದ್ಯಾರ್ಥಿನಿ ಮಾತ್ರ ದಾಖಲಾಗಿದ್ದು, ದಾಖಲಾತಿ ಹೆಚ್ಚಿಸಲು ಸಾಕಷ್ಟು ಪ್ರಯತ್ನ ಪಟ್ಟರು ಸಾಧ್ಯವಾಗ್ತಾ ಇಲ್ಲ ಅಂತಾ ಶಿಕ್ಷಕಿ ಪದ್ಮಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಖಾಸಗಿ ಶಾಲೆಗಳ ಪೈಪೋಟಿಯಿಂದಾಗಿ ಸರ್ಕಾರಿ ಶಾಲೆಗಳು ನಶಿಸುತ್ತಿದ್ದು, ಮುಚ್ಚುವ ಹಂತಕ್ಕೆ ತಲುಪುತ್ತಿರೋದು ಮಾತ್ರ ದುರಂತ. ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ದಾಖಲಾತಿ ಇಲ್ಲದೇ ಮುಚ್ಚುತ್ತಿದ್ದು, ಪೋಷಕರ ಇಂಗ್ಲೀಷ್ ವ್ಯಾಮೋಹವೇ ಇದಕ್ಕೆ ಮೂಲಕ ಕಾರಣ ಎಂಬಂತಾಗಿದೆ.