ಶಿರಾ :
ಇಂದು ಶಿರಾನಗರದ ಉಪ ವಿಭಾಗದ ಕಚೇರಿ ಆವರಣದಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ ಗಳಿಗೆ ಪೊಲೀಸರು ರೌಡಿ ಪರೇಡ್ ನಡೆಸಿದರು. ಈ ವೇಳೆ ವಿವಿಧ ಪೊಲೀಸ್ ಠಾಣೆಗಳಲ್ಲಿರುವ ಸುಮಾರು 124 ರೌಡಿಗಳ ಪರೇಡ್ ನಡೆಸಿ, ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದರು.
ಇದೇ ವೇಳೆ ರೌಡಿ ಪರೇಡ್ ನಲ್ಲಿ ಡಿವೈಎಸ್‌ಪಿ ಬಿ.ಕೆ. ಶೇಖರ್ ಮಾತನಾಡಿ ಬೇರೆ ಬೇರೆ ಕಾರಣಗಳಿಂದ ಕೆಲವರ ಹೆಸರು ರೌಡಿಶೀಟ್ ಲೀಸ್ಟ್ ನಲ್ಲಿ ಸೇರಿರುತ್ತದೆ. ಅಂತಹವರು ಉತ್ತಮ ನಡೆತೆಯಿಂದ ಚಾರಿತ್ರ್ಯವಂತರಾಗಿ ಬದುಕಲು ಅವಕಾಶವಿದೆ. ಅಪರಾಧಿಕ ಕೃತ್ಯಗಳಲ್ಲಿ ಭಾಗವಹಿಸಿದರೆ ನಿಮಗಷ್ಟೇ ಅಲ್ಲ, ನಿಮ್ಮ ಕುಟುಂಬ ವರ್ಗದವರಿಗೂ ಸಮಸ್ಯೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಶಿರಾ ನಗರ ಸೇರಿದಂತೆ ಗ್ರಾಮಾಂತರದಲ್ಲಿರುವ ರೌಡಿ ಶೀಟರ್ ಲೀಸ್ಟ್‌ನಲ್ಲಿರುವ ಕೆಲ ರೌಡಿಗಳು ಅಪರಾಧಿ ಕೃತ್ಯಗಳಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿಲ್ಲ. ಅಂತಹವರಿಗೆ ಉತ್ತಮ ರೀತಿಯಲ್ಲಿ ಬದುಕಲು ಸಮಯ ನೀಡಲಾಗಿದೆ. ಇನ್ನು ಯಾರು ಈ ಸಹಿ ಹಾಕಲು ಬಂದಿಲ್ಲವೋ ಅಂತವರ ಮನೆಗೆ ಹೋಗಿ ಎಳೆದುಕೊಂಡು ಬರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ರು. ಇನ್ನು ನ್ಯಾಯಾಲಯದಲ್ಲಿ ಪ್ರಕರಣ ಮುಗಿದಿರುವ ವ್ಯಕ್ತಿಗಳ ಚಲನವಲನ ಗಳನ್ನು ಗಮನಿಸಿಕೊಂಡು ರೌಡಿ ಶೀಟರ್‌ನಿಂದ ಕೈಬಿಡಬಹುದಾ ಅಥವಾ ಬೇಡವಾ ಎಂಬುದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.