ಮಧುಗಿರಿ :
ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ 75 ನೇ ಹುಟ್ಟು ಹಬ್ಬದ ಅಂಗವಾಗಿ ತಾಲೂಕಿನಲ್ಲಿ 12 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಸೇರಿ 1 ಸಾವಿರದ 600 ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ರಾಜೇಂದ್ರ ರಾಜಣ್ಣ ವಿತರಣೆ ಮಾಡಿದ್ದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಯಣರೆಡ್ಡಿ, ಮಹಾಮಂಡಳದ ಮಾಜಿ ಅಧ್ಯಕ್ಷ ಗಂಗಣ್ಣ, ಉಪವಿಭಾಗಧಿಕಾರಿ ಗೋಟೂರು ಶಿವಪ್ಪ, ಇಒ ಲಕ್ಷ್ಮಣ್, ತಹಶೀಲ್ದಾರ್ ಶೀರಿನ್ ತಾಜ್, ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಕೆ.ಎನ್.ರಾಜಣ್ಣನವರು ಸಚಿವರಾಗಲು ಮಧುಗಿರಿ ಕ್ಷೇತ್ರದ ಜನರ ಆಶೀರ್ವಾದ ಕಾರಣ. ಇಂದು ಹಾಸನ ಜಿಲ್ಲಾ ಉಸ್ತುವಾರಿ ಯಾಗದಿದ್ದರೆ ತುಮಕೂರು ಸೇರಿದಂತೆ ಮಧುಗಿರಿ ಉಪವಿಭಾಗಕ್ಕೆ ಎತ್ತಿನಹೊಳೆ ನೀರು ಮರೀಚಿಕೆಯಾಗುತ್ತಿತ್ತು ಎಂದು ಹೇಳಿದ್ದರು. ರಾಜಣ್ಣನವರ ದೂರದೃಷ್ಟಿಯ ಫಲವಾಗಿ ಈ ವರ್ಷದ ಕೊನೆಯಲ್ಲಿ ನಮ್ಮ ತಾಲೂಕುಗಳ ಕೆರೆಗಳಿಗೆ ನೀರು ಹರಿಯಲಿದೆ ಜನತೆಗೆ ಭರವಸೆ ನೀಡಿದರು.
ಇನ್ನು ದೊಡ್ಡೇರಿ ಹೋಬಳಿಯ 10 ಕೆರೆಗಳಿಗೆ ನೀರು ತುಂಬಿಸಲು, ಅಭಿವೃದ್ಧಿ ಮಾಡಲು 130 ಕೋಟಿ, ಉಳಿದ 45 ಕೆರೆಗಳಿಗೆ 300 ಕೋಟಿಗೂ ಹೆಚ್ಚು ಅನುದಾನ ಘೋಷಣೆಯಾಗಿದೆ. ಕೊರಟಗೆರೆ ಕ್ಷೇತ್ರದ ಕೆರೆಗಳಿಗೆ 350 ಕೋಟಿ ಸೇರಿದಂತೆ 550 ಕೋಟಿ ಅನುದಾನವನ್ನು ಈ ಭಾಗಕ್ಕೆ ಸಿದ್ದರಾಮಯ್ಯ ನವರಿಂದ ಮೀಸಲಿರಿಸಿದ್ದು ಶೀಘ್ರವಾಗಿ ಕೆರೆಗಳಿಗೆ ನೀರು ಹರಿಸಲಿದ್ದೇವೆ ಎಂದು ಹೇಳಿದರು.