SIRA: ಮಳೆಗಾಲ ಆರಂಭಕ್ಕೂ ಮುನ್ನವೇ ಶಿರಾದಲ್ಲಿ ಮಳೆ ಅವಾಂತರ

ಶಿರಾ: 

ಮಳೆಗಾಲ ಆರಂಭಕ್ಕೂ ಮುನ್ನವೇ ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗುತ್ತಿದ್ದು, ನಾನಾ ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ. ಶಿರಾದಲ್ಲೂ ಅಕಾಲಿಕ ಮಳೆ ಅವಾಂತರಗಳು ಆಗಿದ್ದು ಹಲವು ಕುಟುಂಬಗಳು ಬೀದಿಗೆ ಬಿದ್ದಂತಾಗಿದೆ. ಮೊನ್ನೆ ಶುಕ್ರವಾರ ಸಂಜೆ ಶಿರಾದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಯರದಕಟ್ಟೆ ಗ್ರಾಮದಲ್ಲಿ ಸಿಡಿಲು ಬಡಿದಿದ್ದು, ಸಿಡಿಲಿಗೆ ಹನುಮಂತರಾಯಪ್ಪ ಎಂಬುವವರಿಗೆ ಸೇರಿದ ಗುಡಿಸಲು ಬೆಂಕಿಗಾಹುತಿಯಾಗಿತ್ತು.

ಗುಡಿಸಲು ಬೆಂಕಿಗಾಹುತಿಯಾದ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಲತಾ ಹಾಗೂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಕುಟುಂಬದವರನ್ನು ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ವಾಸ್ತವ್ಯಕ್ಕೆ ಇರಿಸಿದ್ದು ಬಿಟ್ಟರೇ, ಘಟನೆ ನಡೆದು 24 ಗಂಟೆ ಕಳೆದ್ರು ಕೂಡ ಯಾವುದೇ ಪರಿಹಾರ ನೀಡಿಲ್ಲ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕ್ತಿದ್ದಾರೆ. ಇನ್ನು ಸಿಡಿಲಿನಿಂದ ಹನುಮಂತರಾಯಪ್ಪ ಕುಟುಂಬ ಇದ್ದ ಗುಡಿಸಲು ಸುಟ್ಟು ಕರಕಲಾಗಿದ್ದು, ಇರಲು ಮನೆ, ಅಡುಗೆ ಮಾಡಿಕೊಳ್ಳಲು ದಿನಸಿ ಪದಾರ್ಥಗಳು, ಹಣ ಇಲ್ಲದೇ ನಿರಾಶ್ರಿತರಾಗಿದ್ದು ಪರದಾಡುವಂತಾಗಿದೆ. ಭರವಸೆ ನೀಡಿ ಹೋದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗ್ತಿಲ್ಲ ಎಂದು ಸ್ಥಳೀಯರು ಹಾಗೂ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ನಿನ್ನೆಯೂ ಶಿರಾ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಬಿರುಗಾಳಿ ಸಹಿತ ಭಾರಿ ಮಳೆಗೆ ಬುಕ್ಕಾಪಟ್ಟಣ ಹೋಬಳಿಯಲ್ಲಿ ಸಾವಿರಾರು ಅಡಿಕೆ, ತೆಂಗಿನ ಮರಗಳು ನೆಲಕಚ್ಚಿವೆ. ಅಲ್ದೇ ಫಸಲಿಗೆ ಬಂದಿರೋ ಮಾವಿನ ಕಾಯಿ ಉದುರಿ ಹೋಗುತ್ತಿದ್ದು ರೈತರು ಕಂಗಾಲಾಗುತ್ತಿದ್ದಾರೆ. ಹಲವೆಡೆ ವಿದ್ಯುತ್‌ ತಂತಿ ಮೇಲೆ ನೂರಾರು ವಿದ್ಯುತ್‌ ಕಂಬಗಳು ಉರುಳಿ ಬಿದ್ದಿದ್ದು ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗ್ತಿದೆ. ಶಾಖದಡು ಗ್ರಾಮದ ಹನುಮಂತರಾಯಪ್ಪ ಎಂಬುವರಿಗೆ  ಸೇರಿದ ಜಮೀನಿನಲ್ಲಿ ಸುಮಾರು  ಇಪ್ಪತ್ತಕ್ಕೂ  ಹೆಚ್ಚು  ಅಧಿಕ ತೆಂಗಿನ ಮರಗಳು ಭಾರಿಗಾಳಿಗೆ ಮುರಿದು ಬಿದ್ದಿದ್ದು, ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅಧಿಕಾರಿಗಳು ತುರ್ತು  ಕ್ರಮ ಕೈಗೊಂಡು  ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. 

ಮಳೆಗಾಲ ಆರಂಭಕ್ಕೂ ಮುನ್ನವೇ ನಾನಾ ಅವಾಂತರಗಳು ಆಗ್ತಾ ಇದ್ದು, ಇನ್ನು ಮಳೆಗಾಲ ಆರಂಭವಾದ ಬಳಿಕ ಇನ್ನೆಷ್ಟು ಅವಾಂತರಗಳು ಸೃಷ್ಟಿಯಾಗುತ್ತೋ ಎಂದು ಕಾದುನೋಡಬೇಕಿದೆ.

Author:

...
Keerthana J

Copy Editor

prajashakthi tv

share
No Reviews