ತುಮಕೂರು : ತುಮಕೂರು ನಗರ ಪಾಲಿಕೆಯ ನಿರ್ಲಕ್ಷ್ಯದ ಬಗ್ಗೆ ಎಷ್ಟೇ ಬಾರಿ ನಿಮ್ಮ ಪ್ರಜಾಶಕ್ತಿ ಮಾಧ್ಯಮ ಸುದ್ದಿ ಬಿತ್ತರಿಸಿದರೂ ಕೂಡ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಸುದ್ದಿ ಮಾಡಿದ ಒಂದು ದಿನ ಸ್ಥಳಕ್ಕೆ ಹೋಗಿ ಕ್ಲೀನ್ ಮಾಡೋ ಕೆಲಸ ಮಾಡ್ತಾರೆ. ಅದಾದ ಮೇಲೆ ಮತ್ತದೆ ಪರಿಸ್ಥಿತಿ. ಸದ್ಯ ತುಮಕೂರಿನ ಮತ್ತೊಂದು ಬೆಳೆಯುತ್ತಿರುವ ಬಡಾವಣೆ ಅಂದರೆ ಅದು ಉಪ್ಪಾರಹಳ್ಳಿ. ಇಲ್ಲಿನ ವಾರ್ಡ್ 24 ರಲ್ಲಿ ಎಲ್ಲೆಂದರಲ್ಲೇ ಕಸದ ರಾಶಿ ಬಿದ್ದಿದೆ. ಇದರಿಂದ ಅಲ್ಲಿ ಓಡಾಡುವ ಸಾರ್ವಜನಿಕರು, ಮಕ್ಕಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಹಲವು ಕಾಯಿಲೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ ವಾರ್ಡ್.
ತುಮಕೂರು ನಗರ ಸ್ವಚ್ಛ ನಗರ, ಸ್ಮಾರ್ಟ್ ಸಿಟಿ ಅಂತಾನೇ ಪ್ರಖ್ಯಾತಿ ಪಡೆದಿದೆ. ಆದರೆ ತುಮಕೂರಿನಲ್ಲಿ ದಿನೇ ದಿನೇ ಕಸ ಮತ್ತು ನಾಯಿಗಳ ಸಮಸ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಹೌದು ಕಸ ಎಸದಿರೋದರಿಂದ ನಾಯಿಗಳು ಹಾಗೂ ಹಂದಿಗಳ ಕಾಟ ಹೆಚ್ಚಾಗಿದೆ ಈ ವಾರ್ಡ್‌ನಲ್ಲಿ. ಕಸ ಹಾಕೋದರಿಂದ ಒಂದು ಕಡೆ ಆರೋಗ್ಯ ಸಮಸ್ಯೆಯಾದರೆ, ಈ ವೆಸ್ಟೇಜ್ ತಿನ್ನೋ ನಾಯಿಗಳು ಜನರ ಮೇಲೆ ದಾಳಿ ಮಾಡ್ತಿವೆ ಅಂತ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿನಿತ್ಯ ಈ ವಾರ್ಡ್‌ನಲ್ಲಿ ಕಸದ ರಾಶಿ ಹೆಚ್ಚಾಗುತ್ತಿದೆ. ಅದನ್ನು ಸರಿಪಡಿಸುವಲ್ಲಿ ಪಾಲಿಕೆ ಎಡವುತ್ತಿದೆ. ಇತ್ತ ಜನರು ಕೂಡ ಪಾಲಿಕೆಯ ನಿರ್ದೇಶನಗಳನ್ನು ಪಾಲಿಸದಿರುವುದು ಕೂಡ ಕಸದ ಸಮಸ್ಯೆಗೆ ಕಾರಣವಾಗಿದೆ. ಇನ್ನು ಕಸದ ರಾಶಿ ಎಲ್ಲೆಂದರಲ್ಲಿ ಬೀಳುತ್ತಿರುವುದರಿಂದ ನಾಯಿಗಳು ಹಾಗೂ ಹಂದಿಗಳ ಅವಾಸಸ್ಥಾನವಾಗಿ ಮಾರ್ಪಟ್ಟಿದೆ. ಈ ಗಲೀಜಿನಿಂದಾಗಿ ಸುತ್ತಮುತ್ತಲ ಜನ ಹಲವು ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ.
ಅದೇನೇ ಇರಲಿ ಇಷ್ಟೆಲ್ಲ ರಾಶಿ ರಾಶಿ ಕಸ ಬಿದ್ದು, ಆ ಕಸದಿಂದ ನಾಯಿಗಳ ಕಾಟ ಹೆಚ್ಚಾಗ್ತಿದ್ರು ಕೂಡ ಪಾಲಿಕೆ ಸಿಬ್ಬಂದಿಗಳು ಈ ಜಾಗವನ್ನು ಸ್ವಚ್ಛಗೊಳಿಸದಿರುವುದು ಬೇಸರ ಸಂಗತಿ. ಇನ್ನಾದರೂ ಸಂಬಂಧಪಟ್ಟಂತಹ ಅಧಿಕಾರಿಗಳು ಎಚ್ಚೆತ್ತುಕೊಂಡು ಅಸ್ವಚ್ಚತೆಯಿಂದ ಕೂಡಿರುವ ಉಪ್ಪಾರಹಳ್ಳಿ ವಾರ್ಡ್ ನಂಬರ್ 24ರ ರಸ್ತೆಯನ್ನು ಸ್ವಚ್ಛಗೊಳಿಸ್ತಾರಾ ಕಾದು ನೋಡಬೇಕಿದೆ.