ಚಿಕ್ಕಬಳ್ಳಾಪುರ : ಶಿಡ್ಲಘಟ್ಟಕ್ಕೆ ಕುಡಿಯುವ ನೀರು | ಗ್ರಾಮದ ರೈತರಿಂದ ಪ್ರತಿಭಟನೆ

ಚಿಕ್ಕಬಳ್ಳಾಪುರ :

ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್ ದೇವಗಾನಹಳ್ಳಿಯ ರಾಮಸಮುದ್ರ ಕೆರೆಯ ನೀರನ್ನು ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರಿಗಾಗಿ ಯೋಜನೆ ಕೈಗೆತ್ತಿಕೊಂಡಿದೆ, ಕೂಡಲೇ ಈ ಯೋಜನೆ ಕೈಬಿಟ್ಟು ಕೆರೆ ವ್ಯಾಪ್ತಿಯ ಅಚ್ಚುಕಟ್ಟು ಜಮೀನುಗಳಿಗೆ ನೀರು ಬಿಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನೀರು ಬಳಕೆದಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ನೀರು ಬಳಕೆದಾರರ ಸಂಘದ ಪಧಾಧಿಕಾರಿಗಳು, ಸದಸ್ಯರು, ರಾಮಸಮುದ್ರ ಕೆರೆ ಹಾಗೂ ಜಲಾನಯನ ಪ್ರದೇಶ ವ್ಯಾಪ್ತಿಯ ಗ್ರಾಮಗಳ ರೈತರು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಕೂಡಲೇ ಈ ಯೋಜನೆ ಕೈಬಿಡುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ನೀರು ಬಳಕೆದಾರರ ಸಂಘದ ಮುಖಂಡರು ಮಾತನಾಡಿ, ನಮ್ಮ ರಾಮಸಮುದ್ರ ಕೆರೆಯ ನೀರನ್ನು ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರು ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಈ ಯೋಜನೆ ಅವೈಜ್ಞಾನಿಕವಾದದ್ದು. ಕೂಡಲೇ ಸರ್ಕಾರ ಈ ಯೋಜನೆಯನ್ನು ಕೈ ಬಿಡಬೇಕು. ಇಲ್ಲಿನ ಸುತ್ತಮುತ್ತಲ ಸುಮಾರು 20 ಹಳ್ಳಿಗಳಿಗೂ ಹೆಚ್ಚಿನ ರೈತರು ಇದೇ ಕೆರೆಯ ನೀರನ್ನು ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ನೀವು ಬೇರೆಡೆ ನೀರು ಹರಿಸಿದರೆ ನಮಗೆ ಹೆಚ್ಚು ತೊಂದರೆಯಾಗುತ್ತದೆ ಎಂದರು.

ರೈತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಭಾಸ್ಕರ್ ಕೆರೆಯ ನೀರನ್ನು ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಕೂಡಲೇ ಅದನ್ನು ರದ್ದು ಪಡಿಸಬೇಕು ಎಂದು ರೈತರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Author:

...
Sushmitha N

Copy Editor

prajashakthi tv

share
No Reviews