ದಾವಣಗೆರೆ : ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಅಮೋಘ್ ಎಚ್.ಪಿ ಎಂಬ ಬಾಲಕ ರಚಿಸಿದ ಪರಿಸರ ಕುರಿತ ಚಿತ್ರಕಲೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಮೆಚ್ಚುಗೆಯ ಪತ್ರ ಸಿಕ್ಕಿದೆ. ಅಮೋಘ್ ಇತ್ತೀಚೆಗೆ ರಚಿಸಿದ ಪರಿಸರ ಸಂರಕ್ಷಣೆಯ ಕುರಿತ ಚಿತ್ರವೊಂದನ್ನು ಪ್ರಧಾನಿ ಮೋದಿಯವರಿಗೆ ಕಳುಹಿಸಿದ್ದ. ಈ ಚಿತ್ರದಲ್ಲಿ ಪರಿಸರದ ಮಹತ್ವ, ಪ್ರಕೃತಿಯ ರಕ್ಷಣೆ ಮತ್ತು ಮುಂಬರುವ ಪೀಳಿಗೆಗಳಿಗೆ ಸುಸ್ಥಿರ ಭವಿಷ್ಯದ ಸಂದೇಶವನ್ನು ಕಲಾತ್ಮಕವಾಗಿ ಚಿತ್ರೀಕರಿಸಲಾಗಿತ್ತು. ಈ ಕಲಾ ಪ್ರತಿಭೆಯನ್ನು ಗುರುತಿಸಿದ ಪ್ರಧಾನ ಮಂತ್ರಿ ಕಾರ್ಯಾಲಯ, ಅಮೋಘ್ ವಿಳಾಸಕ್ಕೆ ಮೆಚ್ಚುಗೆಯ ಪತ್ರ ಕಳುಹಿಸಿದೆ.
ಅಮೋಘ್ ಹೊನ್ನಾಳಿಯವರಾದ ಭರತ್ ಹಾಗೂ ಚಂದನ ದಂತಿಯ ಪುತ್ರ. ಬಾಲಕನ ಚಿತ್ರ ಕೌಶಲ್ಯಕ್ಕೆ ಪೋಷಕರು ಹಾಗೂ ಶಿಕ್ಷಕರ ಶ್ಲಾಘನೀಯ ಬೆಂಬಲ ದೊರಕಿದ್ದು, ಈ ಸಹಕಾರದ ಫಲವಾಗಿ ಚಿತ್ರವು ಹೆಚ್ಚು ಕಲಾತ್ಮಕವಾಗಿ ಮೂಡಿಬಂದಿದೆ.
ಪ್ರಧಾನ ಮಂತ್ರಿಯ ಮೆಚ್ಚುಗೆಯ ಪತ್ರ ದೊರಕಿದ ನಂತರ ಅಮೋಘ್ ಮತ್ತು ಅವರ ಪೋಷಕರು ಅಪಾರ ಸಂತೋಷ ವ್ಯಕ್ತಪಡಿಸಿದ್ದು, ಇದು ಇನ್ನಷ್ಟು ಸೃಜನಶೀಲ ಚಿತ್ರಗಳಿಗಾಗಿ ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ. ಸ್ಥಳೀಯ ಶಿಕ್ಷಕರು ಹಾಗೂ ಸಾರ್ವಜನಿಕರು ಅಮೋಘ್ ಕಲಾ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.