IPL 2025 : ಐಪಿಎಲ್ 2025 ಮತ್ತೆ ಪುನರಾರಂಭವಾಗಿದೆ. ಆದರೆ ಪುನರಾರಂಭದ ಹಿಂದೆಯೇ ಒಂದು ಆಘಾತಕಾರಿ ಬೆಳವಣಿಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳಿಗೆ ಶಾಕ್ ನೀಡಿದೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ಟ್ರಾವಿಸ್ ಹೆಡ್ ಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವಿಷಯವನ್ನು ತಂಡದ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಇಂದು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.
ಟ್ರಾವಿಸ್ ಹೆಡ್, ತಮ್ಮ ತವರಿನ ಆಸ್ಟ್ರೇಲಿಯಾದಲ್ಲಿಯೇ ಕೊರೊನಾ ವೈರಸ್ ಗೆ ತುತ್ತಾಗಿ, ಭಾರತಕ್ಕೆ ತಡವಾಗಿ ಆಗಮಿಸುತ್ತಿದ್ದಾರೆ. ಈ ಕಾರಣದಿಂದ ಅವರು ಮೇ 19 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿರುವ ಮಹತ್ವದ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.
ಭಾರತ-ಪಾಕಿಸ್ತಾನ ನಡುವೆ ಉಂಟಾದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಐಪಿಎಲ್ 2025 ಅನ್ನು ಮೊದಲು ಅರ್ಧದಲ್ಲಿ ನಿಲ್ಲಿಸಲಾಗಿತ್ತು. ಈ ಸಂದರ್ಭ ಎಲ್ಲಾ ವಿದೇಶಿ ಆಟಗಾರರು ತಮ್ಮ ತವರಿಗೆ ಮರಳಿದ್ದರು. ಟ್ರಾವಿಸ್ ಹೆಡ್ ಕೂಡ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದ್ದರು. ಆದರೆ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಭಾರತಕ್ಕೆ ಹಿಂದಿರುಗಿದಾಗ, ಹೆಡ್ ಅವರೊಂದಿಗೆ ಇರಲಿಲ್ಲ. ಈ ಬೆಳವಣಿಗೆಯ ಕುರಿತು ಮಾತನಾಡಿದ ಕೋಚ್ ವೆಟ್ಟೋರಿ ಅವರು, ಹೆಡ್ ಆಸ್ಟ್ರೇಲಿಯಾದಲ್ಲಿದ್ದಾಗಲೇ ಕೊರೊನಾ ಸೋಂಕು ತಗುಲಿದ್ದು, ಈ ಕಾರಣದಿಂದ ಅವರು ತಕ್ಷಣ ಭಾರತಕ್ಕೆ ಬರಲಾಗಿಲ್ಲ. ಅವರು ಸೋಮವಾರ ಬೆಳಿಗ್ಗೆ ಭಾರತಕ್ಕೆ ತಲುಪುವ ನಿರೀಕ್ಷೆಯಿದೆ. ಆದಾಗ್ಯೂ, ಲಕ್ನೋ ವಿರುದ್ಧದ ಪಂದ್ಯದಲ್ಲಿ ಅವರು ಪಾಲ್ಗೊಳ್ಳಲಾಗದು ಎಂದು ಸ್ಪಷ್ಟಪಡಿಸಿದರು.
ಇನ್ನು ಈ ಘಟನೆ ಐಪಿಎಲ್ ನಲ್ಲಿ ನಾಲ್ಕು ವರ್ಷಗಳ ನಂತರ ದಾಖಲಾಗಿರುವ ಮೊದಲ ಕೋವಿಡ್ ಪ್ರಕರಣವಾಗಿದೆ. ಇದೀಗ ಅಭಿಮಾನಿಗಳು ಹೆಡ್ ಶೀಘ್ರ ಗುಣಮುಖರಾಗಲಿ ಎಂಬ ಅಪೇಕ್ಷೆಯಲ್ಲಿದ್ದಾರೆ.