ಚಿಕ್ಕಬಳ್ಳಾಪುರ:
ಪ್ರೇಮಿಗಳ ಮದುವೆ ಮಾಡಿಸಿ ಪ್ರೀತಿ ಉಳಿಸಿದ ಪೊಲೀಸರು. ಪೊಲೀಸರ ಸಮ್ಮುಖದಲ್ಲೇ ಮದುವೆಯಾದ ಪ್ರಣಯ ಪಕ್ಷಿಗಳು. ವಧುವಿಗೆ ಸ್ವತಃ ಕಾಲುಂಗರ ತೊಡಿಸಿ ಆಶೀರ್ವಾದ ಮಾಡಿದ ಪೊಲೀಸ್ ಸಿಬ್ಬಂದಿ. ಇಂತಹ ಅಪರೂಪದ ಘಟನೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರ ಸಾಕ್ಷಿಯಾಗಿದೆ. ಶಿಡ್ಲಘಟ್ಡ ತಾಲೂಕಿನ ದೊಡ್ಡದಾಸೇನಹಳ್ಳಿ ಗ್ರಾಮದ ಕಾರ್ತೀಕ್ ಹಾಗೂ ಶಿಡ್ಲಘಟ್ಟ ನಗರದ ಅಂಕಿತಾ ಕಳೆದ 6 ವರ್ಷದಿಂದ ಪ್ರೀತಿ ಮಾಡ್ತಾ ಇದ್ದರು. ಆದರೆ ಯುವತಿ ಅಂಕಿತಾ ಮನೆಯಲ್ಲಿ ಇವರ ಪ್ರೀತಿಗೆ ಒಪ್ಪಿರಲಿಲ್ಲ. ಅಲ್ಲದೇ ಯುವತಿಯ ಪೋಷಕರು ಬೇರೊಬ್ಬ ಯುವಕನ ಜೊತೆ ಮದುವೆ ಮಾಡಲು ತೀರ್ಮಾನಿಸಿದ್ದರು. ಈ ವಿಚಾರವನ್ನು ಪ್ರಿಯಕರ ಕಾರ್ತೀಕ್ ಗೆ ಅಂಕಿತಾ ತಿಳಿಸಿದ್ದಾಳೆ. ಆದರೆ ಕಾರ್ತಿಕ್ ಇನ್ನೂ ಎರಡು ವರ್ಷಗಳ ಕಾಲ ಮದುವೆ ಬೇಡ ಎಂದು ತಿಳಿಸಿದ್ದು. ಇದರಿಂದ ಬೇಸರಗೊಂಡ ಅಂಕಿತಾ ಕಳೆದ ದಿನ ಶಿಡ್ಲಘಟ್ಟ ನಗರ ಠಾಣೆಯ ಮೊರೆ ಹೋಗಿದ್ದಳು.
ಪೊಲೀಸ್ ಠಾಣೆಗೆ ಯುವಕ ಕಾರ್ತಿಕ್ ಬಂದು ತನ್ನ ಪ್ರೀತಿ ಬಿಟ್ಟಕೊಡುವುದಿಲ್ಲ ಎಂದು ಹಠ ಹಿಡಿದಿದ್ದ, ಪ್ರೇಮಿಗಳ ಗೋಳು ನೋಡಲಾಗದೇ ಪೊಲೀಸರು ಪ್ರೇಮಿಗಳ ಪೋಷಕರನ್ನು ಕರೆಸಿ ಮದುವೆ ಮಾಡಿಸುವಂತೆ ಒಪ್ಪಿಸಿದ್ದಾರೆ. ಮದುವೆಗೆ ಯುವತಿಯ ತಾಯಿ, ಅಕ್ಕ- ಬಾವ ಏನೋ ಒಪ್ಪಿಗೆ ಸೂಚಿಸಿದರು. ಆದರೆ ಈ ಮದುವೆಗೆ ಯುವತಿ ಅಂಕಿತಾ ತಂದೆ ಹಾಗೂ ಯುವಕನ ಪೋಷಕರು ಬಿಲ್ ಕುಲ್ ಒಪ್ಪಲಿಲ್ಲ. ಹೀಗಾಗಿ ಪೊಲೀಸರು ಯುವಕ ಯುವತಿಯ ಹೇಳಿಕೆ ಪಡೆದಿದ್ದಾರೆ. ನಾವು ಬೇರೆ ಮದುವೆ ಆಗಲು ಸಾದ್ಯವಿಲ್ಲ ಎಂದು ಗೋಳಾಡಿದ್ದಾರೆ. ಪ್ರೇಮಿಗಳ ಗೋಳಾಟಕ್ಕೆ ಮರುಗಿದ ಪೊಲೀಸರು ಪೊಲೀಸ್ ಠಾಣೆ ಮುಂಭಾಗ ತಾಳಿಯನ್ನು ಕಟ್ಟಿಸಿದ್ದಾರೆ. ಅಲ್ಲದೇ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್ ತಂದೆಯ ಸ್ಥಾನದಲ್ಲಿ ನಿಂತು ನವ ವಧುವಿಗೆ ಕಾಲುಂಗರ ತೊಡಿಸಿ ಆಶೀರ್ವಾದ ನೀಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಆರು ವರ್ಷಗಳ ಪ್ರೀತಿಗೆ ಪೊಲೀಸರಿಂದ ನ್ಯಾಯ ದೊರೆಕಿದ್ದು ನೂತನ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ಜೋಡಿ, ಪೋಷಕರ ವಿರೋಧದ ನಡುವೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಒಟ್ಟಿನಲ್ಲಿ ಪ್ರೀತಿ ಅಮರ ಅಂತಾ ಸುತ್ತಾಡಿದ ಪ್ರೇಮ ಪಕ್ಷಿಗಳು ಪೊಲೀಸರ ನೇತೃತ್ವದಲ್ಲಿ ಮದುವೆಯಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಪ್ರೇಮಿಗಳಿಗೆ ಆಸರೆಯಾದ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.