PLANE CRASH : ಪ್ರಯಾಣಿಕರು, ಸಿಬ್ಬಂದಿಗಳು ಸೇರಿ 242 ಜನರನ್ನು ಹೊತ್ತ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿರುವ ಘಟನೆ ಗುಜರಾತ್ ನ ಅಹಮದಬಾದ್ ಮೇಧಿನಿನಗರದಲ್ಲಿ ಸಂಭವಿಸಿದೆ.
ನಿನ್ನೆ ಅಹಮದಾಬಾದ್ ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171, (Air India Plane Crash) ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ. 672 ಅಡಿ ಎತ್ತರದಿಂದ ಮೆಡಿಕಲ್ ಹಾಸ್ಟೆಲ್ ಮೇಲೆ ಬಂದು ಅಪ್ಪಳಿಸಿದೆ. ಈ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡಿದೆ. ಭೀಕರ ವಿಮಾನ ಅಪಘಾತದಲ್ಲಿ ವಿಮಾನದಲ್ಲಿ ಇದ್ದ 230 ಪ್ರಯಾಣಿಕರು 12 ಮಂದಿ ಸಿಬ್ಬಂದಿಗಳು ಇದ್ದರು ಎನ್ನಲಾಗಿದ್ದು, ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ತಾಂತ್ರಿಕ ದೋಷದ ಕಾರಣಕ್ಕೆ ಟೇಕ್ ಆಫ್ ಆದ 15 ಕಿ ಮೀಟರ್ ದೂರದಲ್ಲಿ 600 ರಿಂದ 700 ಅಡಿ ಎತ್ತರದಲ್ಲಿ ಹಾರಿರುವಾಗ ವಿಮಾನ ಪತನವಾಗಿದೆ. ಜನ ವಸತಿ ಕಟ್ಟಡ ಮೇಲೆ ಮತ್ತು ಅಲ್ಲೇ ಇರುವ ಹಾರ್ಸ್ ಕ್ಯಾಂಪ್ ಬಳಿ ವಿಮಾನ ಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ವಿಮಾನದಲ್ಲಿ ಗುಜರಾತಿನ ಮಾಜಿ ಸಿಎಂ ವಿಜಯ್ ರೂಪಾನಿ ಇದ್ದರು ಎನ್ನಲಾಗಿದೆ.
AI-171 ನಂಬರ್ ನ ಬೋಯಿಂಗ್ -787-8 ಮಾದರಿಯ ವಿಮಾನ 1.10ಕ್ಕೆ ಟೇಕ್ ಆಫ್ ಆಗಬೇಕಿದ್ದ ವಿಮಾನ 1.38ಕ್ಕೆ ತಡವಾಗಿ ಟೇಕ್ ಆಫ್ ಆಗಿದೆ ಎನ್ನಲಾಗುತ್ತಿದೆ. ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ದಟ್ಟ ಹೊಗೆ ಆವರಿಸಿದೆ. ವಿಮಾನವು ಅಹಮ್ಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ ಗೆ ತೆರಳುತ್ತಿತ್ತು. ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಅಪಘಾತದ ಕಾರಣವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಈ ಅಪಘಾತದ ನಂತರ, ಎಲ್ಲ ವಿಮಾನ ಮಾರ್ಗಗಳನ್ನು, ಭೂ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಸ್ಥಳಕ್ಕೆ ಭಾರೀ ಭದ್ರತೆಯೊಂದಿಗೆ ಪೊಲೀಸ್ ಪಡೆ, ಅಗ್ನಿಶಾಮಕ, ವೈದ್ಯರ ತಂಡ ಆಗಮಿಸಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ವಿಮಾನ ದುರಂತ ಬಗ್ಗೆ ಅವಲೋಕನ ಮಾಡಲು ಸೂರತ್ನಿಂದ ಅಹಮದಾಬಾದ್ಗೆ ತಲುಪಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಪಘಾತದ ವಿಷಯದಲ್ಲಿ ಮುಖ್ಯಮಂತ್ರಿಯೊಂದಿಗೆ ಮಾತುಕತೆ, ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡಲಾಗುತ್ತದೆ ಎಂದು ಭರವಸೆ ಕೂಡ ನೀಡಿದ್ದಾರೆ.