ಪಾವಗಡ : ತರಕಾರಿ ಸಂತೆಯಲ್ಲಿರೋ ಮಾರಾಟಗಾರರ ಗೋಳು ಕೇಳುವವರೇ ಇಲ್ಲ..?

ಪಾವಗಡದ ವೈ.ಎನ್‌ ಹೊಸಕೋಟೆಯ ತರಕಾರಿ ಸಂತೆ
ಪಾವಗಡದ ವೈ.ಎನ್‌ ಹೊಸಕೋಟೆಯ ತರಕಾರಿ ಸಂತೆ
ತುಮಕೂರು

ಪಾವಗಡ:

ಗಡಿ ತಾಲೂಕು ಪಾವಗಡ ತಾಲೂಕಿನ ಗಡಿ ಭಾಗವಾದ ವೈ.ಎನ್‌ ಹೊಸಕೋಟೆಯ ತರಕಾರಿ ಸಂತೆಗೆ ತಾಲೂಕಿನ ವಿವಿಧ ಕಡೆಗಳಿಂದ ರೈತರು ತಾವು ಬೆಳೆದಂತಹ ತರಕಾರಿಗಳನ್ನು ಮಾರಾಟ ಮಾಡಲು ಬರ್ತಾರೆ. ಆದರೆ ಇಲ್ಲಿ ಮಾರಾಟ ಮಾಡಲು ಬರುವ ರೈತರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯ ಸಿಗ್ತಾ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ಶೌಚಾಲಯದ ವ್ಯವಸ್ತೆ ಆಗಲಿ ಇಲ್ಲ ಜೊತೆಗೆ ಬಿಸಲಲ್ಲೇ ಕುಳಿತು ಮಾರಾಟ ಮಾಡಬೇಕಾದ ದುಸ್ಥಿತಿ ಇದೆ. ಜೊತೆಗೆ ಮಾರುಕಟ್ಟೆಯಲ್ಲಿ ಶುಚಿತ್ವ ಅನ್ನೋದು ಮಾಯವಾಗಿದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುವ ಭೀತಿ ಎದುರಾಗಿದೆ.

ಇನ್ನು ನಿಯಮಗಳನ್ನು ಗಾಳಿಗೆ ತೂರಿ ದಬ್ಬಾಳಿಕೆ ಮಾಡಿ ರೈತರಿಂದ ಸುಂಕ ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ ಸುಂಕ ಕಟ್ಟಿಸಿ ಕೊಂಡಿರೋದಕ್ಕೆ ಯಾವುದೇ ಚೀಟಿಯನ್ನು ಕೂಡ ಕೊಡುವುದಿಲ್ಲ. ಇಷ್ಟೆಲ್ಲಾ ದಬ್ಬಾಳಿಕೆ ಮಾಡ್ತಾ ಇದ್ದರೂ ಕೂಡ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ. ಸುಂಕ ವಸೂಲಿ ಮಾಡುವವರ ವಿರುದ್ಧ ಸಂತೆಗೆ ಬಂದ ವ್ಯಾಪಾರಿಗಳು ಆಕ್ರೋಶ ಹೊರಹಾಕ್ತಿದ್ದಾರೆ.

ಸುಂಕ ವಸೂಲಿಗೆ ಹರಾಜು ಕೂಗಿದ್ದ ವ್ಯಕ್ತಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಹಾಗೂ ಅವರನ್ನು ಹರಾಜು ಕೂಗದೇ ಬ್ಲಾಕ್‌ಲಿಸ್ಟ್‌ನಲ್ಲಿ ಹಾಕಬೇಕು ಎಂದು ಸ್ಥಳೀಯ ಮುಖಂಡರು ಆರೋಪಿಸ್ತಾ ಇದ್ದಾರೆ. ಅಲ್ಲದೇ ದಿನೇ ದಿನೇ ಪಟ್ಟಣ ಬೆಳೆದಂತೆ ಸುಮಾರು 3 ಎಕರೆ ಇದ್ದ ಸಂತೆ ಮೈದಾನವನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಕೂಡಲೇ ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮುಖಂಡರು ಆಗ್ರಹಿಸಿದರು.

Author:

share
No Reviews