ಪಾವಗಡ :
ಗಡಿ ತಾಲೂಕು ಪಾವಗಡ ಹೇಳಿ ಕೇಳಿ ಬರ ಪೀಡಿತ ಪ್ರದೇಶ, ಇಲ್ಲಿ ಮಳೆಯೂ ಸರಿಯಾಗಿ ಆಗೋದಿಲ್ಲ ಜೊತೆಗೆ ಅಂತರ್ಜಲವೂ ಕೂಡ ಕಡಿಮೆ. ಕಡಲೆಕಾಯಿ, ಹುಣುಸೆ ಹಣ್ಣ, ನೆಲಗಡಲೆ ಬೆಳೆಯನ್ನೇ ನಂಬಿಕೊಂಡು ಇಲ್ಲಿನ ರೈತರಿದ್ದಾರೆ. ಮಳೆಯ ಕೊರತೆಯಿಂದ ಕಡಲೆಕಾಯಿ ಬೆಳೆಯಿಂದ ರೈತರಿಗೆ ನಷ್ಟ ಉಂಟಾಗುತ್ತಿತ್ತು. ಆದರೆ ಇಲ್ಲಿನ ರೈತರ ಮತ್ತೊಂದು ಆದಾಯದ ಮೂಲ ಅಂದರೆ ಹುಣುಸೆ ಹಣ್ಣು. ಆದರೆ ಈ ವರ್ಷ ಹುಣುಸೆ ಹಣ್ಣಿನ ಫಸಲು ಕೂಡ ಕೈಕೊಟ್ಟಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ.
ಹುಣುಸೆ ಹಣ್ಣಿಗೆ ಮಾರ್ಕೆಟ್‌ನಲ್ಲಿ ಬಂಫರ್ ಬೆಲೆ ಏನೋ ಇದೆ, ಆದರೆ ಫಸಲು ಕೈಕೊಟ್ಟಿದ್ದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಸಾಮಾನ್ಯವಾಗಿ ಜನವರಿ, ಫೆಬ್ರವರಿ ತಿಂಗಳಲ್ಲಿ ಹುಣಸೆ ಕೊಯ್ಲು ನಡೆದು, ಮಾರ್ಚ್, ಏಪ್ರಿಲ್ ವರೆಗೂ ಹಳ್ಳಿಗಳಲ್ಲಿ ಹುಣಸೆ ಸುಲಿಯುವ ಚಟುವಟಿಕೆ ಚುರುಕಾಗಿರುತ್ತದೆ. ಆದರೆ ಈ ಬಾರಿ ಅಂತಹ ದೃಶ್ಯಗಳು ತೀರಾ ವಿರಳವಾಗಿವೆ. ತೋಟಗಾರಿಕೆ ಇಲಾಖೆ ಪ್ರಕಾರ ಪಾವಗಡ ತಾಲ್ಲೂಕಿನ ಸುಮಾರು 22,00 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಸಾವಿರಾರು ಹುಣಸೆ ಮರಗಳಿವೆ. ಇಲ್ಲಿನ ರೈತರು ನೈಸರ್ಗಿಕವಾಗಿ ಬೆಳೆದ ಹುಣಸೆ ಮರಗಳನ್ನು ಮಾತ್ರ ಕಾಪಾಡಿಕೊಂಡು ಬರುತ್ತಿದ್ದು, ಹೈಬ್ರೀಡ್ ತಳಿಗಳನ್ನು ಬೆಳೆಸುವ ಆಸಕ್ತಿ ತೋರಿಸುತ್ತಿಲ್ಲ. ಅಷ್ಟೇ ಅಲ್ಲದೆ ಮರಗಳಿಗೆ ಗೊಬ್ಬರ, ನೀರು ಕೊಟ್ಟು ಪೋಷಣೆ ಮಾಡುತ್ತಿಲ್ಲ. ಜೊತೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಉಷ್ಣಾಂಶ, ಮಳೆಯ ಕೊರತೆ, ಕೀಟಗಳ ಬಾಧೆ ಮತ್ತಿತರೆ ಕಾರಣಗಳಿಂದ ಹುಣಸೆ ಇಳುವರಿ ಕಡಿಮೆಯಾಗುತ್ತಿದೆಯಂತೆ.
ಸದ್ಯ ಹುಣಸೆಹಣ್ಣು ಟನ್ ರೂ.70 ಸಾವಿರದವರೆಗೆ ಸೇಲ್ ಆಗ್ತಿದೆ. ಹುಣಸೆಬೀಜಕ್ಕೂ ಬೇಡಿಕೆ ಹೆಚ್ಚಾಗಿದ್ದು ಕ್ವಿಂಟಾಲಿಗೆ 3 ರಿಂದ 4 ಸಾವಿರ ಬೆಲೆ ಬಂದಿದೆ. ಆದರೆ ಈ ಬಾರಿ ತಾಲ್ಲೂಕಿನಲ್ಲಿ ಹುಣಸೆ ಇಳುವರಿಯಲ್ಲಿ ಭಾರೀ ಕುಸಿತವಾಗಿದ್ದು 1,000 ಮೆಟ್ರಿಕ್ ಟನ್ ಮೀರುವುದಿಲ್ಲ ಎನ್ನಲಾಗುತ್ತಿದೆ.