ಪಾವಗಡ:
ಪಾವಗಡದ ಐತಿಹಾಸಿಕ ಪ್ರಸಿದ್ದ ಕಣಿವೆ ಲಕ್ಷ್ಮೀ ನರಸಿಂಹಸ್ವಾಮಿಯ 70 ನೇ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು, ಹೋಮ- ಹವನ ಜರಿಗಿತು. ಅಲ್ಲದೇ ದೇವರಿಗೆ ಹಾಗೂ ದೇವಸ್ಥಾನಕ್ಕೆ ಹಲವು ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರ ಕಣ್ಮನ ಸೆಳೆಯಿತು.
ಮುಜರಾಯಿ ಇಲಾಖೆಗೆ ಸೇರಿದ ಲಕ್ಷ್ಮೀನರಸಿಂಹಸ್ವಾಮಿಯ ಬ್ರಹ್ಮ ರಥೋತ್ಸವ ಮಧ್ಯಾಹ್ನ 12.30ರ ಸುಮಾರಿಗೆ ತಹಶೀಲ್ದಾರ್ ವರದರಾಜ್ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು, ಸಾವಿರಾರು ಭಕ್ತರ ಸಮ್ಮುಖದಲ್ಲಿ ತೇರು ಬೀದಿಯಲ್ಲಿ ರಥವನ್ನು ಎಳೆಯಲಾಯಿತು. ರಥ ಎಳೆಯುತ್ತಿದ್ದಂತೆ ಭಕ್ತರು ಬಾಳೆಹಣ್ಣು, ದವನ ಎಸೆದು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಪ್ರಾರ್ಥಿಸಿದರು.
ಸುಡುಬಿಸಿಲನ್ನು ಕೂಡ ಲೆಕ್ಕಿಸದೇ ಸಹಸ್ರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು, ಜನರ ನೂಕು ನುಗ್ಗಲು ತಪ್ಪಿಸಲು ಹಾಗೂ ದೇವರ ದರ್ಶನಕ್ಕೆ ಯಾವುದೇ ಅನಾನುಕೂಲವಾಗದಂತೆ ಭಕ್ತರಿಗೆ ಸೂಕ್ತ ಮೂಲ ಸೌಲಭ್ಯದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ರಥೋತ್ಸವದಲ್ಲಿ ಹರಕೆ ಹೊತ್ತ ಹಲವು ಮಂದಿ ಅಲ್ಲಲ್ಲಿ ಕೊಪ್ಪಲು ಹಾಕಿದ್ದು ಬಂದಂತಹ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ಜೊತೆ ಪ್ರಸಾದ ವಿನಿಮಯ ವ್ಯವಸ್ಥೆ ಮಾಡಿದ್ದರು. ಇನ್ನು ರಥೋತ್ಸವದಲ್ಲಿ ಶಿವಕುಮಾರ ಸ್ವಾಮೀಜಿ ಹಾಗೂ ಎಪಿಜೆ ಅಬ್ದುಲ್ ಕಲಾಂ ಸಂಘದ ಮುಸ್ಲಿಂ ಯುವಕರಿಂದ ಜಾತ್ರೆಗೆ ಬಂದಂತಹ ಭಕ್ತಾದಿಗಳಿಗೆ ಮಜ್ಜಿಗೆ ಹೆಸರುಬೇಳೆ ಪಾನಕ ನೀಡಿದ್ದು ವಿಶೇಷವಾಗಿತ್ತು.