ಪಾವಗಡ : ಜೆಸಿಬಿಯಿಂದ ನರೇಗಾ ಕೆಲಸ ಸಿಗ್ತಿಲ್ಲ | ಎರಡು ಗುಂಪುಗಳ ನಡುವೆ ಗಲಾಟೆ

ಪಾವಗಡ :

ನರೇಗಾ ಯೋಜನೆಯ ಕೆಲಸಕ್ಕೆ ಜೆಸಿಬಿಗಳಲ್ಲಿ ಕೆಲಸ ಮಾಡ್ತಾ ಇದ್ದು, ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಪಾವಗಡ ತಾಲೂಕಿನ ವೈ.ಎನ್‌ ಹೊಸಕೋಟೆ ಬಳಿ ನಡೆದಿದೆ. ಹಳ್ಳಿಗಳ ಜನರಿಗೆ ಕೆಲಸದ ಜೊತೆ ಕೂಲಿಯೂ ಸಿಗಲೆಂದು ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೆ ತಂದಿದೆ. ನರೇಗಾ ಯೋಜನೆಯಿಂದ ಎಷ್ಟೋ ಕೂಲಿ ಕಾರ್ಮಿಕರು ಜೀವನ ಕಟ್ಟಿಕೊಂಡಿದ್ದಾರೆ. ಆದರೆ ಇದೇ ನರೇಗಾ ಯೋಜನೆಯಿಂದ ನಮಗೆ ಕೆಲಸ ಸಿಗದಂತಾಗಿದೆ ಎಂದು ಕೂಲಿ ಕಾರ್ಮಿಕರು ಗಲಾಟೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಪಾವಗಡ ತಾಲೂಕಿನ ಕೊಟಗುಡ್ಡ ಕೆರೆಯಲ್ಲಿ ನರೇಗಾ ಕಾಮಗಾರಿಯು ಜೆಸಿಬಿಗಳಿಂದ ಮಾಡಲಾಗ್ತಿದ್ದು, ಇದರಿಂದ ನಮಗೆ ಕೆಲಸ ಸಿಗದಂತಾಗಿದೆ ಎಂದು ಆ ಭಾಗದ ಕೂಲಿ ಆಳುಗಳು ಪ್ರಶ್ನಿಸಲು ಮುಂದಾದ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನು ಪಾವಗಡ ತಾಲೂಕಿನ ಬಹುತೇಕ ನರೇಗಾ ಕಾಮಗಾರಿಗಳು ರಜೆ ದಿನಗಳಲ್ಲಿ ಜೆಸಿಬಿ ಮೂಲಕ ಮಾಡುತ್ತಿರೋದು ಕಂಡು ಬಂದಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದರೂ ಕೂಡ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ನರೇಗಾ ಕಾಮಗಾರಿ ವಿಚಾರವಾಗಿ ಮಾಹಿತಿ ಕೇಳಲು ಅಧಿಕಾರಿಗಳಿಗೆ ಕರೆ ಮಾಡಿದರೆ ವಿಚಾರಿಸ್ತೀವಿ ಅಂತಾ ಮಾತ್ರ ಹೇಳ್ತಾರೆ. ಇನ್ನು ಕೆಲವರು ನರೇಗಾ ಇಂಜಿನಿಯರ್‌ಗಳು ಮೊಬೈಲ್‌ನನ್ನೇ ಸ್ವಿಚ್‌ ಆಫ್‌ ಮಾಡಿಕೊಳ್ತಾರೆ ಎಂದು ಕೂಲಿ ಕಾರ್ಮಿಕರು ಆಕ್ರೋಶ ಹೊರ ಹಾಕಿದರು. ನರೇಗಾ ಕಾಮಗಾರಿ ವಿಚಾರವಾಗಿ ತಾಲೂಕು ಪಂಚಾಯತಿ ಇ ಓ ಜಾನಕಿ ರಾಮ್ ಗಮನಕ್ಕೆ ತಂದರೆ, ನಾನು ಕೆಲವೇ ದಿನಗಳಲ್ಲಿ ನಿವೃತ್ತಿ ಆಗುತ್ತಿದ್ದೇನೆ ದಯವಿಟ್ಟು ಇಂತಹ ವಿಚಾರ ನನ್ನ ಬಳಿ ತರಬೇಡಿ ಎಂಬುದಾಗಿ ಸಬೂಬು ಹೇಳ್ತಾ ಇದ್ದಾರಂತೆ.

ಅದೇನೆ ಆಗಲಿ ನರೇಗಾ ಯೋಜನೆಯಿಂದ ಕೆಲಸ ಸಿಗುತ್ತೆ ಅಂತಾ ಆಸೆಯಿಂದ ಕಾಯ್ತಾ ಇದ್ದ ಕೂಲಿ ಕಾರ್ಮಿಕರಿಗೆ ಜೆಸಿಬಿಯಿಂದ ಕೆಲಸ ಸಿಗದಂತಾಗಿದ್ದು, ಎಷ್ಟರ ಮಟ್ಟಿಗೆ ಸರಿ ಅಂತಾ ಸ್ಥಳೀಯ ಕೂಲಿ ಕಾರ್ಮಿಕರ ಪ್ರಶ್ನೆಯಾಗಿದೆ. ಸದ್ಯ ಈ ಸಂಬಂಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.
 

Author:

...
Sushmitha N

Copy Editor

prajashakthi tv

share
No Reviews