ಬುಕ್ಕಾಪಟ್ಟಣ :
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ನಿನ್ನೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗೃಹ ಸಚಿವ ಪರಮೇಶ್ವರ್, ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಬುಕ್ಕಾಪಟ್ಟಣಕ್ಕೆ ಆಗಮಿಸಿದ್ದರು. ಬುಕ್ಕಾಪಟ್ಟಣಕ್ಕೆ ಆಗಮಿಸಿದ ಗೃಹ ಸಚಿವ ಪರಮೇಶ್ವರ್‌ಗೆ ಅಭಿಮಾನಿಗಳು ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಈ ವೇಳೆ ಸಚಿವ ಪರಮೇಶ್ವರ್‌ಗೆ ಮನವಿ ಸಲ್ಲಿಸಲು ಜನರು ಮುಗಿಬಿದ್ದರು. ಸಾರ್ವಜನಿಕರ ಮನವಿ ಮೇರೆಗೆ ಬುಕ್ಕಾಪಟ್ಟಣದ ಪೊಲೀಸ್ ಠಾಣೆಗೆ ಪರಂ ಭೇಟಿ ನೀಡಿ, ಪೊಲೀಸ್ ಸ್ಟೇಷನ್‌ನ ಸ್ಥಿತಿಗತಿಯನ್ನು ಕಣ್ಣಾರೆ ಕಂಡರು.
ಈ ವೇಳೆ ಬುಕ್ಕಾಪಟ್ಟಣದ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಸ್ಥಳೀಯ ಮುಖಂಡರು ಸಚಿವ ಪರಮೇಶ್ವರ್‌ಗೆ ಮನವಿ ಮಾಡಿದರು. ಬುಕ್ಕಾಪಟ್ಟಣ ಗ್ರಾಮ ಪಂಚಾಯ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಈ ಭಾಗದಲ್ಲಿ ಅಪಘಾತವಾದರೆ ಶಿರಾ ಪೊಲೀಸ್ ಠಾಣೆಗೆ ತೆರಳಬೇಕು, ಅಲ್ಲಿಗೆ ಹೋಗಲು ಸಕಾಲದಲ್ಲಿ ಬಸ್ ವ್ಯವಸ್ಥೆ ಇಲ್ಲದಿರೋದರಿಂದ ಜನರು ಸಾಕಷ್ಟು ತೊಂದರೆಯನ್ನು ಅನುಭವಿಸ್ತಾ ಇದ್ದಾರೆ. ಹೀಗಾಗಿ ಬುಕ್ಕಾಪಟ್ಟಣ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಸ್ಥಳೀಯರು ಪತ್ರದ ಮೂಲಕ ಪರಮೇಶ್ವರ್‌ಗೆ ಮನವಿ ಸಲ್ಲಿಸಿದರು. ಸ್ಥಳೀಯರ ಮನವಿಗೆ ಸ್ಪಂದಿಸಿದ ಪರಂ ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ, ಪೊಲೀಸ್ ಠಾಣೆ ಮಂಜೂರು ಮಾಡುವ ಭರವಸೆಯನ್ನು ನೀಡಿದರು.