ನವದೆಹಲಿ : ಸ್ಯಾಂಡಲ್‌ವುಡ್‌ನ ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಇದು ಕನ್ನಡ ಚಿತ್ರರಂಗಕ್ಕೆ ಅತ್ಯಂತ ಗೌರವದ ಕ್ಷಣವಾಗಿದೆ. ನಿನ್ನೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿ ಪ್ರದಾನವಾಯಿತು.
ಅನಂತ್ ನಾಗ್ ಅವರು ಭಾರತೀಯ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆಯ ಮೂಲಕ ಖ್ಯಾತಿ ಗಳಿಸಿದ್ದಾರೆ. ಕನ್ನಡ, ಹಿಂದಿ, ಮರಾಠಿ ಸೇರಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮ ವಿವಿಧಪಾತ್ರ ನಿರ್ವಹಣೆಯ ಮೂಲಕ ಚಲನಚಿತ್ರ ಪ್ರೇಮಿಗಳ ಮನ ಗೆದ್ದಿದ್ದಾರೆ. ಜೊತೆಗೆ, ರಂಗಭೂಮಿಯಲ್ಲಿಯೂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.
ಹಲವಾರು ವರ್ಷಗಳಿಂದ ಅನಂತ್ ನಾಗ್ ಅವರಿಗೆ ರಾಷ್ಟ್ರಪತಿಗಳ ಪದ್ಮ ಪುರಸ್ಕಾರ ಸಿಗಬೇಕು ಎಂಬುದು ಕನ್ನಡಿಗರ ಆಸೆಯಾಗಿತ್ತು. ಇದೀಗ ಅವರು ಪದ್ಮಭೂಷಣಕ್ಕೆ ಭಾಜನರಾಗಿರುವುದು, ಕನ್ನಡಿಗರಲ್ಲಿ ಸಂತಸ ಮೂಡಿಸಿದೆ.
ಸ್ಯಾಂಡಲ್‌ವುಡ್‌ನ ತಾರೆಗಳು, ರಾಜಕೀಯ ಮುಖಂಡರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅನಂತ್ ನಾಗ್ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಪದ್ಮಭೂಷಣ ಭಾರತದ ಮೂರನೇ ಅಗ್ರ ಗೌರವಪೂರ್ಣ ನಾಗರಿಕ ಪ್ರಶಸ್ತಿಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.