ತುಮಕೂರು:
ದೇಶದಲ್ಲಿ ಸದ್ಯ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೂ ಕೂಡ ಗೋಹತ್ಯೆ ಪ್ರಕರಣಗಳು ಬೆಳಕಿಗೆ ಬರ್ತಾನೆ ಇವೆ. ಕೆಲವು ಕಟುಕರು ಅಕ್ರಮವಾಗಿ ಗೋವುಗಳನ್ನ ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ. ತುಮಕೂರಿನಲ್ಲಿ ಇದೀಗ ಬಜರಂಗದಳ ಕಾರ್ಯಕರ್ತರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದು, ಮೂರು ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10ಕ್ಕೂ ಹೆಚ್ಚು ಗೋವುಗಳನ್ನ ರಕ್ಷಣೆ ಮಾಡಿದ್ದಾರೆ.
ತುಮಕೂರು- ಶಿರಾ ರಾಷ್ಟ್ರೀಯ ಹೆದ್ದಾರಿಯ ಕೆಸ್ತೂರು-ಊರುಕೆರೆ ರಸ್ತೆಯಲ್ಲಿ ನಡೆದಿರುವ ಘಟನೆಯಿದು. ಶಿರಾ ಕಡೆಯಿಂದ ತುಮಕೂರಿನ ಮರಳೂರು ಕಡೆಗೆ ಅಕ್ರಮವಾಗಿ ಗೋವುಗಳನ್ನ ಸಾಗಾಟ ಮಾಡಲಾಗುತಿತ್ತು. ಈ ಬಗ್ಗೆ ಬಜರಂಗದಳ ಕಾರ್ಯಕರ್ತರಿಗೆ ಖಚಿತ ಮಾಹಿತಿ ಬಂದ ಹಿನ್ನೆಲೆ, ಕೆಸ್ತೂರು ಊರುಕೆರೆ ಬಳಿ ಈ ಮೂರೂ ವಾಹನಗಳನ್ನ ಅಡ್ಡಗಟ್ಟಿ ನಿಲ್ಲಿಸಿ ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ಗೋವುಗಳನ್ನ ರಕ್ಷಿಸಿದ್ದಾರೆ. ಬಳಿಕ ಕೋರಾ ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ಕೊಟ್ಟ ಕೋರಾ ಪೊಲೀಸರು, ಒಟ್ಟು ಐವರು ಆರೋಪಿಗಳನ್ನ ಬಂಧಿಸಿ, ವಾಹನಗಳನ್ನ ಸೀಜ್ ಮಾಡಿದ್ದಾರೆ.
ಈ ಸಂಬಂಧ ಐವರ ಮೇಲೆ ಎಫ್ ಐ ಆರ್ ದಾಖಲು ಮಾಡಿಕೊಳ್ಳಲಾಗಿದೆ. ತುಮಕೂರಿನ ಮರಳೂರು ಮೂಲದವರಾದ ಮನೋಜ್, ಜಗದೀಶ್, ಸಯ್ಯದ್ ಸಾಯಿಲ್ ,ಹೇಮಂತ್ ಕುಮಾರ್ ಮತ್ತು ವೆಂಕಟೇಶ್ ಮೇಲೆ ಪ್ರಕರಣ ದಾಖಲಾಗಿದ್ದು, ಈ ಐದೂ ಜನರನ್ನ ಬಂಧಿಸಲಾಗಿದೆ.
ಒಟ್ಟಿನಲ್ಲಿ ಬಜರಂಗದಳ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆಯಿಂದ 10ಕ್ಕೂ ಹೆಚ್ಚು ಗೋವುಗಳನ್ನ ರಕ್ಷಿಸಲಾಗಿದ್ದು, ಅವುಗಳನ್ನ ಗೋಶಾಲೆಗೆ ಬಿಡಲಾಗಿದೆ.