VIJAYAPURA NEWS : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗುವ ನೀಟ್ (NEET-UG) ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ವಿಜಯಪುರದ ನಿಖಿಲ್ ಸೋನ್ನದ್ ಅವರು ರಾಜ್ಯದ ಮೊದಲ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅವರು ಶೇ.99.99 ಅಂಕಗಳಿಸಿ ಅಖಿಲ ಭಾರತ ಮಟ್ಟದಲ್ಲಿ 17ನೇ ರ‍್ಯಾಂಕ್ ಪಡೆದು, ರಾಜ್ಯದ ಗೌರವ ಹೆಚ್ಚಿಸಿದ್ದಾರೆ.
ನಿಖಿಲ್, ವಿಜಯಪುರದ 'ಸಂಜೀವಿನಿ' ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಖ್ಯಾತ ವೈದ್ಯರಾದ ಡಾ. ಸಿದ್ದಪ್ಪ ಸೋನ್ನದ್ ಮತ್ತು ಡಾ. ಮೀನಾಕ್ಷಿ ಸೋನ್ನದ್ ದಂಪತಿಯ ಪುತ್ರ. ಮಂಗಳೂರು ವಳಚ್ಚಿಲ್‌ನ ಎಕ್ಸ್‌ಪರ್ಟ್ ಪಿಯು ಕಾಲೇಜುನಲ್ಲಿ ಅಧ್ಯಯನ ಮಾಡುತ್ತಿದ್ದ ನಿಖಿಲ್, ತೀವ್ರ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಈ ಬಾರಿ ಕರ್ನಾಟಕದಿಂದ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 83,582 ಮಂದಿ ಅರ್ಹತೆ ಪಡೆದಿದ್ದಾರೆ. ರಾಜ್ಯವು ಅಖಿಲ ಭಾರತ ಮಟ್ಟದಲ್ಲಿ 17ನೇ ಸ್ಥಾನ ಪಡೆಯಲು ಯಶಸ್ವಿಯಾಗಿದೆ. ಈ ವರ್ಷದ ನೀಟ್ ಪರೀಕ್ಷೆ 13 ಭಾಷೆಗಳಲ್ಲಿ ನಡೆಸಲಾಗಿದ್ದು, ಇದರಲ್ಲಿ ಕನ್ನಡ ಕೂಡ ಸೇರಿತ್ತು. 460 ವಿದ್ಯಾರ್ಥಿಗಳು ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದರು. ಇದೇ ವೇಳೆ ವಿದೇಶದ 14 ನಗರಗಳಲ್ಲಿಯೂ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ಅಭ್ಯರ್ಥಿಗಳು ತಮ್ಮ ಅರ್ಜಿಯ ಸಂಖ್ಯೆ ಹಾಗೂ ಪಾಸ್‌ವರ್ಡ್ ಮೂಲಕ NTA ಅಥವಾ NEET UG ವೆಬ್‌ಸೈಟ್‌ನಲ್ಲಿ ಲಾಗಿನ್ ಮಾಡಿ ಫಲಿತಾಂಶ ಡೌನ್‌ಲೋಡ್ ಮಾಡಿಕೊಳ್ಳಬಹುದು. ಶೇಕಡಾವಾರು ಅಂಕಗಳು ಹಾಗೂ ಅಖಿಲ ಭಾರತ ರ‍್ಯಾಂಕಿಂಗ್ ಕೂಡ ಪ್ರಕಟಿಸಲಾಗಿದೆ. ಈ ಬಾರಿ ಕನಿಷ್ಠ 144 ಅಂಕ (720ಕ್ಕೆ) ಪಡೆದ ಅಭ್ಯರ್ಥಿಗಳು ಕೌನ್ಸೆಲಿಂಗ್‌ಗೆ ಅರ್ಹರಾಗಿದ್ದಾರೆ.