ನವದೆಹಲಿ:
ಕಾಂಗ್ರೆಸ್ ಮುಖಂಡೆ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅನಾರೋಗ್ಯ ಹಿನ್ನೆಲೆ ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
78 ವರ್ಷದ ಸೋನಿಯಾ ಗಾಂಧಿ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು, ಹೀಗಾಗಿ ಇಂದು ಬೆಳಗ್ಗೆ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇವರು ಆಸ್ಪತ್ರೆಗೆ ದಾಖಲಾಗಿರುವುದರ ಬಗ್ಗೆ ನಿಖರವಾದ ಮಾಹಿತಿ ಇದುವರೆಗೂ ಬಹಿರಂಗವಾಗಿಲ್ಲ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅವರು ಈ ಹಿಂದೆ ಕೂಡ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಸೋನಿಯಾ ಅವರ ಆರೋಗ್ಯದ ಮೇಲೆ ವೈದ್ಯರ ತಂಡ ನಿಗಾ ಇರಿಸಲಾಗಿದೆ.
ಕಳೆದ ವಾರ ಫೆಬ್ರವರಿ 13ರಂದು ಸಂಸತ್ತಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ರಾಜ್ಯಸಭೆಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಸೋನಿಯಾ ಗಾಂಧಿ ಅವರು ಕಳೆದ ವಾರದವರೆಗೂ ಅಧಿವೇಶನದಲ್ಲಿ ಪಾಲ್ಗೊಂಡು ಸಮೀಕ್ಷೆ ವಿಳಂಬದ ಕುರಿತು ಧ್ವನಿ ಎತ್ತಿದ್ದರು. ಅಲ್ಲದೆ, ಭಾರತದ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಭದ್ರತೆ ನೀಡುವಲ್ಲಿ ನ್ಯಾಷನಲ್ ಫುಡ್ ಸೆಕ್ಯುರಿಟಿ ಆಕ್ಟ್ನ ಪ್ರಾಮುಖ್ಯತೆ, ದೇಶದ 140 ಕೋಟಿ ಜನಸಂಖ್ಯೆಗೆ ಆಹಾರ ಲಭ್ಯತೆ ಬಗ್ಗೆ ಅವರು ಮಾತನಾಡಿದ್ದರು. ಇದೀಗ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.