ಶಿರಾ : ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ | ಜೀವಭಯದಲ್ಲಿ ಜನರ ಓಡಾಟ

ಶಿರಾ : ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲಕ್ಕೂ ಮುನ್ನವೇ ಭರ್ಜರಿ ಮಳೆಯಾಗಿತ್ತು. ಇದೀಗ ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಅದರಂತೆ ತುಮಕೂರಿನಲ್ಲೂ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಈ ನಡುವೆ ಎಲ್ಲಾ ಇಲಾಖೆಯ ಅಧಿಕಾರಿಗಳು ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕೆಂದು ತುಮಕೂರು ಡಿಸಿ ಶುಭಾಕಲ್ಯಾಣ್‌ ಖಡಕ್‌ ಸೂಚನೆ ನೀಡಿದರು. ಆದ್ರೆ ಯಾಕೋ ಬೆಸ್ಕಾಂ ಮತ್ತು ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಶಿರಾ ತಾಲೂಕಿನಲ್ಲಿ ವಿದ್ಯುತ್‌ ಕಂಬಳಿಗೆ ಬಳ್ಳಿಗಳು ಹಬ್ಬಿವೆ. ಆದ್ರೆ ಇದ್ಯಾವುದೇ ತಿಳಿದೇ ಇಲ್ಲವೇನೋ ಎಂಬಂತೆ ಅಧಿಕಾರಿಗಳು ಜಾಣ ಕುರುಡುತನ ತೋರಿಸುತ್ತಿದ್ದಾರೆ.

ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಕ್ರಾಸ್‌ನ ಶಿರಾ - ಅಮರಪುರ ರಸ್ತೆಯ ಬದಿಯಲ್ಲಿರುವ ವಿದ್ಯುತ್‌ ಕಂಬ ಬಳ್ಳಿಯಿಂದ ಮುಚ್ಚಿಹೋಗಿದೆ. ಈ ವಿದ್ಯುತ್‌ ಕಂಬದ ಸುತ್ತ ಗಿಡಗೆಂಟೆಗಳು ಬೆಳೆದು ಸಾವಿಗೆ ದಾರಿಯಾಗಿವೆ. ನಿತ್ಯ ವಾಹನ ಸವಾರರು, ದನಕರುಗಳು, ಪಾದಾಚಾರಿಗಳು, ಓಡಾಡುತ್ತಿರುತ್ತಾರೆ. ಈ ವೇಳೆ ಹಬ್ಬಿರುವ ಬಳ್ಳಿಯಿಂದ ವಿದ್ಯುತ್‌ ಪ್ರವಹಿಸಿ ಸಾವು ನೋವು ಸಂಭವಿಸುವ ಸಾದ್ಯತೆ ಅತೀ ಹೆಚ್ಚಾಗಿಯೇ ಇದೆ. ಅದು ಹೇಳಿ ಕೇಳಿ ಟಿಸಿ. ಮಳೆಯ ನೀರಿನಿಂದ ಶಾರ್ಟ್‌ ಸರ್ಕ್ಯೂಟ್‌ ಆಗುವ ಸಂಭವ ಹೆಚ್ಚಾಗಿರುತ್ತದೆ. ಜೊತೆಯಲ್ಲಿ ಪಕ್ಕದಲ್ಲಿಯೇ ತೋಟ, ಹೊಲ ಇರುವುದರಿಂದ ರೈತರು ಕೆಲಸಕ್ಕೆ ಬಂದಾಗ ಈ ವಿದ್ಯುತ್‌ ಬಳ್ಳಿ ಸ್ಪರ್ಷಿಸಿ ಸಾವನ್ನಪ್ಪಬಹುದು.

ಇನ್ನು ವಿದ್ಯುತ್‌ ಸರಬರಾಜು ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯುತ್‌ ಪರಿವರ್ತಕ ಹಾಗೂ ಕಂಬಗಳಿಗೆ ಸುತ್ತಿರುವ ಗಿಡಗಂಟಿ, ಬಳ್ಳಿಗಳು ಬೆಳೆದು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ನಿರಂತರ ಮಳೆಯಿಂದಾಗಿ ಕಂಬಗಳ ಮೇಲೆ ಬೀಳುವ ಮಳೆಹನಿ ಬಳ್ಳಿಗಳ ಮೂಲಕ ನೆಲದಲ್ಲಿ ಹರಿಯುತ್ತದೆ. ವಿದ್ಯುತ್‌ ಕಂಬದ ಬಳಿ ಪಾದಚಾರಿಗಳು ಜೀವಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.

ಈ ಕೂಡಲೇ ಸಂಬಂಧಿಸಿದ ಬೆಸ್ಕಾಂ ಕಚೇರಿ ಸಿಬ್ಬಂದಿ, ಅಧಿಕಾರಿಗಳು ವಿದ್ಯುತ್‌ ಕಂಬ ಹಾಗೂ ಪರಿವರ್ತಕಗಳಿಗೆ ಹಬ್ಬಿರುವ ಬಳ್ಳಿ ತೆರವುಗೊಳಿಸಬೇಕು. ವಿದ್ಯುತ್‌ ತಂತಿ ಹಾದುಹೋಗಿರುವ ಕಡೆ ಮರಗಳ ಟೊಂಗೆ ಕತ್ತರಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಾಗೂ ವಿದ್ಯುತ್‌ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ವಾಹನ ಸವಾರರು ಹಾಗೂ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

 

 

Author:

...
Keerthana J

Copy Editor

prajashakthi tv

share
No Reviews