ಪಾವಗಡ:
ಪಾವಗಡ ಪಟ್ಟಣದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ವೇಳೆ ಸಾಕಷ್ಟು ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸದೇ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಲಾಗಿತ್ತು. ಈ ಬಗ್ಗೆ ದೂರು ಸಲ್ಲಿಸಿ ಐದು ತಿಂಗಳು ಕಳೆದ್ರೂ ಯಾವುದೇ ಕ್ರಮ ಕೈಗೊಳ್ಳದೇ ಇರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿ ರಾಷ್ಟ್ರಧ್ವಜದ ಬಗ್ಗೆ ಅಗೌರವ ಸಲ್ಲಿಸಿದ ಅಧಿಕಾರಿಗಳ ಬಗ್ಗೆ ತಕ್ಷಣ ಕ್ರಮ ಕೈಗೊಂಡು, ಇಂತಹ ಘಟನೆಗಳು ಮತ್ತೇ ಮರುಕಳಿಸಬಾರದೆಂದು ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ದೂರು ನೀಡಿತ್ತು. ಆದ್ರೆ ದೂರು ನೀಡಿ 5 ತಿಂಗಳೇ ಕಳೆದು ಹೋಗಿದೆ. ಸರ್ಕಾರದ ಆದೇಶ ಉಲ್ಲಂಘನೆ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರೋದ್ರ ವಿರುದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡದೇ ತಹಶೀಲ್ದಾರ್ ವರದರಾಜ್ ಮೌನವಾಗಿರೋದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಅಲ್ದೇ ಸರ್ಕಾರಿ ಅಧಿಕಾರಿಗಳೇ ಸರ್ಕಾರದ ಆದೇಶ ಉಲ್ಲಂಘನೆ ಮಾಡ್ತಾ ಇರೋದು ನೋಡಿದ್ರೆ ಇನ್ನು ಜನ ಸಾಮಾನ್ಯರ ಪಾಡೇನು, ಇನ್ನು ಸರ್ಕಾರ ಯಾವ ಉದ್ದೇಶಕ್ಕಾಗಿ ಆದೇಶಗಳನ್ನ ಜಾರಿ ಮಾಡ್ತಾರೆ, ಅಲ್ದೇ ಇಂತವರು ಸರ್ಕಾರಿ ಕೆಲಸಕ್ಕೆ ಬೇಕೇ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡ್ತಿದೆ. ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತು ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತಾ ಕಾದುನೋಡಬೇಕಿದೆ.