ಶಿರಾ:
ಇತ್ತೀಚೆಗಷ್ಟೇ ಪ್ರಯಾಗ್‌ರಾಜ್‌ನಲ್ಲಿ ಮುಕ್ತಾಯಗೊಂಡ ಐತಿಹಾಸಿಕ ಕುಂಭಮೇಳದಲ್ಲಿ ನಾಗಾಸಾಧುವೊಬ್ಬರು ತುಮಕೂರಿನ ಕೆಲವು ಪುಣ್ಯಕ್ಷೇತ್ರಗಳ ಬಗ್ಗೆ ಮಾತನಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಿದ್ದಗಂಗಾ ಮಠ, ಶಿವಕುಮಾರ ಸ್ವಾಮೀಜಿ, ಗುಬ್ಬಿ ಚನ್ನಬಸವೇಶ್ವರರ ಪಾದುಕೆ ಪವಾಡ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ನಾಗಾಸಾಧು ಧನಂಜಯ ಭೈರವ ಅಘೋರಿ ಮಾತನಾಡಿದ್ರು. ಈ ವಿಡಿಯೋಗಳು ಲಕ್ಷ ಲಕ್ಷ ವೀಕ್ಷಣೆಯನ್ನ ಪಡೆದು, ಈ ನಾಗಾಸಾಧು ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದ್ರು. ಇದೀಗ ನಾಗಾಸಾಧು ಧನಂಜಯ ಗುರೂಜಿ ತುಮಕೂರು ಜಿಲ್ಲೆಯ ಶಿರಾಗೆ ಭೇಟಿ ಕೊಟ್ಟಿದ್ದು, ಅವರನ್ನ ನೋಡಲು ಸಾವಿರಾರು ಭಕ್ತರು ಮುಗಿಬಿದ್ದ ಘಟನೆ ನಡೆಯಿತು.
ನಾಗಸಾಧು ಧನಂಜಯ ಗುರೂಜಿ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಸಾಕ್ಷಿ ಹಳ್ಳಿ ಶ್ರೀ ಮಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆಯನ್ನ ಸಲ್ಲಿಸಿದ್ರು. ಮಣ್ಣಮ್ಮ ದೇವಿಯ ಪೂಜೆಗೆ ಆಗಮಿಸುವುದಾಗಿ ನಾಗಾಸಾಧು ಧನಂಜಯ ಗುರೂಜಿ ಹೇಳಿಕೊಂಡಿದ್ರು. ಇದು ಭಕ್ತರ ಹರ್ಷಕ್ಕೆ ಕಾರಣವಾಗಿತ್ತು. ಜೊತೆಗೆ ಫೇಮಸ್ ನಾಗಾಸಾಧು ಮಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಬರುವ ವಿಚಾರ ಎಲ್ಲಾ ಕಡೆ ಹಬ್ಬಿದ್ದರ ಪರಿಣಾಮ, ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ರು.
ನಾಗಸಾಧು ಬರುವ ದಾರಿಯುದ್ದಕ್ಕೂ ಪುಷ್ಪ ಹಾಕಿ ಜೈಕಾರ ಕೂಗಿ ಪೂರ್ಣಕುಂಭ ಸ್ವಾಗತವನ್ನ ಕೋರಲಾಯ್ತು. ಜೊತೆಗೆ ನಾಗಾಸಾಧುಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಸ್ಥಳದಲ್ಲಿ ನೂಕುನುಗ್ಗಲು ಏರ್ಪಟ್ಟಿತ್ತು. ನಾಗಸಾಧು ಆಗಮಿಸುವ ಸಲುವಾಗಿ ಶ್ರೀ ಮಣ್ಣಮ ದೇವಿಗೆ ವಿಶೇಷ ಅಲಂಕಾರವನ್ನ ಕೂಡ ಮಾಡಲಾಗಿತ್ತು. ನಾಗಸಾಧು ಅವರಿಂದ ವಿಶೇಷ ಪೂಜಾ ಕೈಂಕರ್ಯಗಳನ್ನು ಮಾಡಿಸಲಾಯಿತು. ಒಟ್ಟಾರೆ ನಾಗಸಾಧು ಅವರ ಆಗಮನದಿಂದಾಗಿ ಸಾಕ್ಷಿಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿಮಾರ್ಣವಾಗಿತ್ತು. ಸುತ್ತಮುತ್ತಲಿನ ಊರಿನ ಜನರಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು.