ಮೈಸೂರು : ತಮ್ಮ ಮಕ್ಕಳು ಹೀಗೆ ಬದುಕಬೇಕು ಅಂತಾ ಪೋಷಕರು ಕನಸು ಕಟ್ಟಿಕೊಂಡಿರ್ತಾರೆ, ಆದರೆ ಮಕ್ಕಳು ಮಾಡುವ ಕೆಲಸಕ್ಕೆ ಕುಟುಂಬವೇ ನಾಶವಾಗಿದೆ. ತನ್ನ ಮಗಳು ಪ್ರಿಯಕರನೊಂದಿಗೆ ಓಡಿಹೋದಳು ಅಂತಾ ಮನನೊಂದ ಕುಟುಂಬದ ಮೂವರು ಮಂದಿ ಪ್ರಾಣ ಬಿಟ್ಟಿದ್ದಾರೆ, ಇತ್ತ ಹೆತ್ತವರ ಸಮಾಧಿ ಮೇಲೆ ಅರಮನೆ ಕಟ್ಟುಕೊಂಡ ಮಗಳು ಎಲ್ಲಿದ್ದಾಳೋ ಗೊತ್ತೇ ಇಲ್ಲ, ಮೈಸೂರಿನಲ್ಲಿ ಇಂತಹ ಹೃದಯವಿದ್ರಾವಕ ಘಟನೆ ನಡೆದಿದೆ.
ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ವಾಸವಾಗಿದ್ದ ಮಹದೇವಸ್ವಾಮಿ ಕುಟುಂಬ ದುರಂತ ಅಂತ್ಯ ಕಂಡಿದೆ. ಮಹದೇವಸ್ವಾಮಿ ಅವರ ಹಿರಿಯ ಮಗಳು ಅರ್ಪಿತಾ ಲವ್ ಮಾಡ್ತಾ ಇದ್ದು, ಮನೆಬಿಟ್ಟು ತನ್ನ ಲವರ್ ಜೊತೆ ಓಡಿಹೋಗಿದ್ದಾಳೆ. ಮರ್ಯಾದೆಗೆ ಅಂಜಿದ ಮಹದೇವಸ್ವಾಮಿ, ಪತ್ನಿ ಮಂಜುಳ ಹಾಗೂ ಮಗಳು ಹರ್ಷಿತಾ ಮನನೊಂದು ಡೆತ್‌ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆ ಮಗಳು ಮನೆಬಿಟ್ಟು ಹೋಗಿದ್ದಾಳೆ ಎಂಬ ವಿಷಯ ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿ ರಾತ್ರಿಯೆಲ್ಲಾ ಮರುಗಿದ್ದಾರೆ. ಬೆಳಗ್ಗೆ ಅಕ್ಕ- ಪಕ್ಕದ ಮನೆಯವರು ನಿಮ್ಮ ಮಗಳು ಎಲ್ಲಿ ಎಂದು ಕೇಳಿದರೆ ಏನು ಅಂತಾ ಉತ್ತರ ಕೊಡಲಿ ಎಂದು ದುಃಖಿತರಾದ ಮಹದೇವಸ್ವಾಮಿ ದಾರಿ ಕಾಣದೇ ಮುಂಜಾನೆ 4 ಗಂಟೆಗೆ 4 ಪುಟಗಳ ಡೆತ್‌ನೋಟ್ ಬರೆದಿಟ್ಟು, ಪತ್ನಿ ಮಂಜುಳ ಹಾಗೂ ಹರ್ಷಿತಾ ಜೊತೆ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದು, ಇಡೀ ಬೂದನೂರು ಗ್ರಾಮದಲ್ಲಿ ಶೋಕ ಮಡುಗಟ್ಟಿತ್ತು.
ಇನ್ನು ಕೆರೆಯಲ್ಲಿ ಶೋಧಕಾರ್ಯ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕೆರೆಯಲ್ಲಿದ್ದ ಮೃತ ದೇಹಗಳನ್ನು ಹೊರ ತೆಗೆದಿದ್ದು, ಮಳೆಯ ನಡುವಯೇ ಮೃತರ ಅಂತ್ಯಕ್ರಿಯೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ರು. ಆದರೆ ಅಪ್ಪ-ಅಮ್ಮ ಹಾಗೂ ತಂಗಿ ಅಂತ್ಯಕ್ರಿಯೆಗೂ ಬಾರದೇ ಮಗಳು ಅರ್ಪಿತಾ ಕಟುಕಳಾಗಿದ್ಳು. ಗ್ರಾಮಸ್ಥರು ಅರ್ಪಿತಾಗೆ ಹಿಡಿಶಾಪ ಹಾಕುತ್ತಲೇ ಮೃತರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಇನ್ನು ಮೃತರು ಬರೆದಿರುವ 4 ಪುಟಗಳ ಡೆತ್‌ನೋಟ್‌ನಲ್ಲಿ ನಮ್ಮನ್ನು ಹೂಳಬೇಡಿ, ಅಗ್ನಿಸ್ಪರ್ಷ ಮಾಡಿ. ನಮ್ಮ ಸಾವಿಗೆ ನಾವೇ ಕಾರಣ. ಮಾನಕ್ಕೆ ಅಂಜಿ ಸಾಯುತ್ತಿದ್ದೇವೆ. ನಮ್ಮ ಪರಿಸ್ಥಿತಿ ಯಾರಿಗೂ ಬರೋದು ಬೇಡ. ನಮ್ಮ ಆಸ್ತಿಯಲ್ಲಿ ಒಂದು ರೂಪಾಯಿಯೂ ಅವಳಿಗೆ ಸಿಗಬಾರದು. ಎಲ್ಲಾ ಆಸ್ತಿಯನ್ನು ಚಿಕ್ಕಪ್ಪನಿಗೆ ಕೊಡಿ ಎಂದು ಬರೆದಿದ್ದು, ಆ ಡೆತ್‌ನೋಟ್ ನೋಡಿ ಇಡೀ ಊರಿಗೆ ಊರೇ ಕಣ್ಣೀರಾಕಿದೆ.