ತುಮಕೂರು : ಯೋಧರ ಒಳಿತಿಗಾಗಿ ಸಿದ್ದಲಿಂಗಾ ಶ್ರೀಗಳ ನೇತೃತ್ವದಲ್ಲಿ ಮೃತ್ಯಂಜಯ ಹೋಮ- ಹವನ

ತುಮಕೂರು : 

ಕಳೆದ ಮೂರ್ನಾಲ್ಕು ದಿನಗಳಿಂದ ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ಧ ನಡೆಯುತ್ತಿದ್ದು, ನಿನ್ನೆ ಸಂಜೆ 5 ಗಂಟೆಗೆ ಕದನ ವಿರಾಮ ಕೂಡ ಘೋಷಣೆ ಆಗಿತ್ತು. ಕದನ ವಿರಾಮ ಘೋಷಣೆ ಆದರೂ ಕೂಡ ಬಾಲ ಬಿಚ್ಚಿದ ಪಾಕಿಸ್ತಾನ ಮತ್ತೆ ಭಾರತದ ಮೇಲೆ ಡ್ರೋನ್‌ ದಾಳಿ ನಡೆಸಿತು. ಡ್ರೋನ್‌ ದಾಳಿಯಿಂದ ಭಾರತದ ರಕ್ಷಣೆಗಾಗಿ ಭಾರತ ಸೇನೆ ಕೂಡ ಪ್ರತಿದಾಳಿ ನಡೆಸುತ್ತಿದೆ, ಭಾರತದ ಗಡಿಯಲ್ಲಿ ನಮ್ಮ ವೀರ ಯೋಧರು ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ಕಾಯ್ತಾ ಇದ್ದು, ಸೈನಿಕರ ಒಳಿತಿಗಾಗಿ ಹಾಗೂ ಪ್ರಧಾನಿ ಮೋದಿ ಅವರ ಆರೋಗ್ಯಕ್ಕಾಗಿ ನಗರದ ಭದ್ರಮ್ಮ ಸರ್ಕಲ್‌ ಬಳಿ ಇರೋ ಸೋಮೇಶ್ವರ ದೇವಸ್ಥಾನದಲ್ಲಿ ಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ  ಮೃತ್ಯುಂಜಯ ಹೋಮವನ್ನು ನಡೆಸಲಾಯಿತು.

ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಸಮಾಜದಿಂದ ಹೋಮ- ಹವನ ನಡೆಸಲಾಗಿದ್ದು, ಪೂಜಾ ಕಾರ್ಯದಲ್ಲಿ  ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠದ ಶಿವಾನಂದ ಶಿವಚಾರ್ಯ ಸೇರಿದಂತೆ ಹಲವು ಸ್ವಾಮೀಜಿಗಳು ಭಾಗಿಯಾಗಿ ಯೋಧರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.

ಹೋಮ ಹಾಗೂ ವಿಶೇಷ ಪೂಜೆ ಬಳಿಕ ಮಾತನಾಡಿದ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು, ಪಹಲ್ಗಾಮ್‌ ದಾಳಿ ಬಳಿಕ ಪ್ರಧಾನಿ ಮೋದಿ ಕೊಟ್ಟ ಭರವಸೆಯಂತೆ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ, ಉಗ್ರರ ನೆಲೆಗಳನ್ನು ಧ್ವಂಸ ಮಾಡ್ತಿದ್ದಾರೆ. ಪಾಕಿಸ್ತಾನ ಎಂದಿಗೂ ನೆರೆ ರಾಷ್ಟ್ರವಾಗಿ ಎಂದಿಗೂ ಸ್ನೇಹದ ಹಸ್ತವನ್ನು ಚಾಚಿಲ್ಲ. ಭಾರತ ಯಾವುದೇ ಕಾರಣಕ್ಕೂ ಅಪ್ರಚೋದಿತ ದಾಳಿ ನಡೆಸಿಲ್ಲ, ಬದಲಾಗಿ ಪಾಕಿಸ್ತಾನದ ದಾಳಿಗೆ ಪ್ರತಿ ದಾಳಿ ನಡೆಸುತ್ತಿವೆ. ಈ ವೇಳೆ ನಾವೆಲ್ಲರೂ ದೇಶದ ಜೊತೆ ಇರಬೇಕು ಎಂದು ದೇಶದ ಜನರಿಗೆ ಸಿದ್ದಗಂಗಾ ಶ್ರೀಗಳು ಸಂದೇಶ ರವಾನಿಸಿದರು.

ಭಾರತ ಹಾಗೂ ಪಾಕ್‌ ನಡುವಿನ ಯುದ್ಧಕ್ಕೆ ವಿರಾಮ ಘೋಷಣೆ ಮಾಡಿದರೂ ಕೂಡ ಪಾಕಿಸ್ತಾನ ಕುತಂತ್ರ ಬುದ್ಧಿ ತೋರಿಸಿ, ಭಾರತದ ಹಲವು ಕಡೆ ಕ್ಷಿಪಣಿ ಹಾಗೂ ಡ್ರೋನ್‌ ಗಳನ್ನು ಹಾರಿಸಿದೆ. ಆದರೆ ನಮ್ಮ ಭಾರತದ ಹೆಮ್ಮೆಯ ಸೈನಿಕರು ಹಗಲು ರಾತ್ರಿ ಶ್ರಮವಹಿಸಿ ನಮ್ಮ ದೇಶದ ರಕ್ಷಣೆ ಮಾಡ್ತಾ ಇದ್ದಾರೆ. ನಾವು ಅವರ ಜೊತೆ ನಿಲ್ಲೋಣ ಎಂದರು. ಯುದ್ಧದಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಬೇಕು ಎಂದು ಸಿದ್ದಲಿಂಗಾ ಶ್ರೀಗಳು ತಿಳಿಸಿದರು.

ಹಿರೇಮಠದ ಶಿವಾನಂದ ಶಿವಚಾರ್ಯ ಮಾತನಾಡಿ, ಪಾಕಿಸ್ತಾನ ಒಂದು ರೀತಿ ಚಟಕ್ಕೆ ಬಿದ್ದಿದೆ. ಈ ಒಂದು ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಸೈನ್ಯದ ಬಲವನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಪಾಕಿಸ್ತಾನ ಬುದ್ಧಿ ಕಲಿಯುವ ದೇಶವೇ ಅಲ್ಲ. ಆ ದೇಶಕ್ಕೆ ವಿಶ್ವದಲ್ಲಿ ಮಾನ್ಯತೆಯೇ ಇಲ್ಲ, ಕದನ ವಿರಾಮ ಎಂಬ ಪದದ ಉಪಯೋಗ ಪಡೆದುಕೊಂಡು ತಕ್ಷಣ ದಾಳಿ ಮಾಡಿದೆ. ಹೀಗಾಗಿ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ಕೊಡಲೇಬೇಕಾಗಿದೆ ಎಂದು ಹೇಳಿದರು.

ಸಿದ್ದಗಂಗಾ ಆಸ್ಪತ್ರೆಯ ನಿರ್ದೇಶಕರಾದ ಪರಮೇಶ್ವರ್‌ ಅವರು ಮಾತನಾಡಿ, ಪಾಕ್‌ನ ಕುತಂತ್ರ ಬುದ್ಧಿಯನ್ನು ಖಂಡಿಸಿದರು. ಪಾಕಿಸ್ತಾನದ ಎಲ್ಲಾ ಪ್ರಯತ್ನಗಳನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಪಾಕಿಸ್ತಾನದ ದಾಳಿಗೆ ತಕ್ಕ ಉತ್ತರ ಕೊಟ್ಟಿರೋದು ಭಾರತೀಯ ಸೇನೆ ಹಾಗೂ ಮೋದಿ ಜಿ ಸರ್ಕಾರದ ಹೆಮ್ಮೆ. ಇನ್ನು ಸೈನಿಕರ ಒಳಿತಿಗಾಗಿ ಇಂದು ನಾವು ಪೂಜೆ ಕೈಗೊಂಡಿದ್ದೇವೆ ಎಂದರು.

ಪಾಕಿಸ್ತಾನದ ಕುತಂತ್ರ ಬುದ್ಧಿ ಮತ್ತೆ ಮತ್ತೆ ಸಾಬೀತು ಮಾಡ್ತಾ ಇದ್ದು, ಭಾರತೀಯ ಸೈನಿಕರು ಹಗಲು ರಾತ್ರಿ, ಊಟ, ನಿದ್ದೆ ಬಿಟ್ಟು ಶ್ರಮಿಸ್ತಾ ಇದ್ದು. ಸೈನಿಕರಿಗಾಗಿ ದೇಶಾದ್ಯಂತ ನಾಗರೀಕರು ಪೂಜೆ ಪುನಸ್ಕಾರಗಳನ್ನು ಮಾಡ್ತಾ ಇದ್ದಾರೆ.

Author:

...
Sushmitha N

Copy Editor

prajashakthi tv

share
No Reviews