TUMAKURU: ಪಾಳು ಬಿದ್ದಿವೆ ತುಮಕೂರಿನ ಬಹುತೇಕ ಪಾರ್ಕ್‌ಗಳು

ತುಮಕೂರು: 

ಸ್ಮಾರ್ಟ್‌ ಸಿಟಿ ತುಮಕೂರು ಎಷ್ಟು ಸ್ಮಾರ್ಟ್‌ ಆಗುತ್ತಿದೆ ಅನ್ನೋದನ್ನ ಒಮ್ಮೆ ನಗರದಲ್ಲಿ ಸಂಚಾರ ಮಾಡಿದರೆ ಬಯಲಾಗುತ್ತದೆ. ಜನರು ವಾಕಿಂಗ್‌ ಮಾಡಲು, ವಿಶ್ರಾಂತಿ ಪಡೆಯಲು ನಗರದ ಬಡಾವಣೆಯ ಅಲ್ಲಲ್ಲಿ ಪಾರ್ಕ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಆ ಪಾರ್ಕ್‌ಗಳು ಜನರಿಗೆ ಎಷ್ಟು ಉಪಯೋಗ ಆಗುತ್ತಿದೆ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹೌದು ನಗರದಲ್ಲಿರುವ ಅದೆಷ್ಟೋ ಪಾರ್ಕ್‌ಗಳ ಸ್ಥಿತಿ ಹೇಳತೀರದಾಗಿದೆ. ಪಾರ್ಕ್‌ಗಳ ನಿರ್ವಹಣೆಗೆ ಪಾಲಿಕೆ ಅದೆಷ್ಟು ಹಣ ವಿನಿಯೋಗಿಸಿದ್ರು ನೋ ಯೂಸ್‌ ಎಂಬಂತಾಗಿದೆ. ಇದಕ್ಕೆ ಸ್ಪಷ್ಟ ಸಾಕ್ಷ್ಯದಂತಿದೆ ತುಮಕೂರು ಜಯನಗರದ ಪಶ್ಚಿಮ ಬಡಾವಣೆಯ 31ನೇ ವಾರ್ಡ್‌ನ ಬನಶಂಕರಿ ದೇವಸ್ಥಾನದ ಪಕ್ಕದಲ್ಲಿರೋ ಪಾರ್ಕ್‌ಗಳ ದುಸ್ಥಿತಿ.

ಜಯನಗರ ಪಶ್ಚಿಮ ಬಡಾವಣೆಯ 31ನೇ ವಾರ್ಡ್‌ನ ಬನಶಂಕರಿ ದೇವಾಲಯದ ಬಳಿ ಜನರು ವಾಕಿಂಗ್‌ ಹಾಗೂ ವಿಶ್ರಾಂತಿಗೆಂದು ಎರಡು ಪಾರ್ಕ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಪಾರ್ಕ್‌ಗಳನ್ನು ಪಾಲಿಕೆ ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆ ಪಾರ್ಕ್‌ನಲ್ಲಿ ಗಿಡ ಗಂಟೆಗಳು ಬೆಳೆದು ನಿಂತಿದ್ದು, ಜನರು ಓಡಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಪಾರ್ಕ್‌ನಲ್ಲಿ ವಿಶ್ರಾಂತಿ ಪಡೆಯಲು ಜನರು ಹೆದರುವಂತಾಗಿದೆ. ಜೊತೆಗೆ ಪಾರ್ಕ್‌ ಒಳಗೆ ಕಾಲಿಡಲು ಕೂಡ ಜನರು ಭಯಪಡುವಂತ ಸ್ಥಿತಿ ಇದೆ. ಜೊತೆಗೆ ಮಕ್ಕಳು ಪಾರ್ಕ್‌ನಲ್ಲಿ ಆಟವಾಡಲು ಸಾಧ್ಯವಾಗದೇ ರೋಡ್‌ನಲ್ಲೇ ಆಟವಾಡುತ್ತಿದ್ದಾರೆ.

ಇನ್ನು ಪಾರ್ಕ್‌ಗಳ ನಿರ್ವಹಣೆ ಇಲ್ಲದಿರುವುದರಿಂದ ಹಾವು, ಚೇಳು ಸೇರಿ ವಿಷ ಜಂತುಗಳ ಕಾಟ ಹೆಚ್ಚಾಗಿದ್ದು, ಮನೆಗಳಿಗೆ ಬರುವ ಸಾಧ್ಯತೆ ಇದ್ದು ಪಾರ್ಕ್‌ನ ಅಕ್ಕ ಪಕ್ಕದ ನಿವಾಸಿಗಳು ಭಯದಲ್ಲೇ ಜೀವನ ಮಾಡುತ್ತಿದ್ದಾರೆ. ಪಾಲಿಕೆ ಸಿಬ್ಬಂದಿ ಕ್ಲೀನಿಂಗ್‌ಗೆ ಏನೋ ಬರ್ತಾರೆ ಆದರೆ ಪಾರ್ಕ್‌ನ ಹೊರಗೆ ರೋಡ್‌ ಮಾತ್ರ ಕ್ಲೀನ್‌ ಮಾಡಿ ಹೋಗುತ್ತಾರೆ. ಆದರೆ  ಪಾರ್ಕ್‌ನಲ್ಲಿ ಬೆಳದಿರೋ ಗಿಡಗಳನ್ನು ಮಾತ್ರ ಕತ್ತರಿಸುವ ಕೆಲಸಕ್ಕೆ ಮಾತ್ರ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಜನರ ಉಪಯೋಗಕ್ಕಾಗಿ ಪಾರ್ಕ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಆದ್ರೆ ಅದ್ರ ನಿರ್ವಹಣೆ ಮಾಡಲು ಮಾತ್ರ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತುಕೊಂಡು ಪಾರ್ಕ್‌ಗಳನ್ನು ಸ್ವಚ್ಛಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಾರಾ ಎಂದು ಕಾದುನೋಡಬೇಕಿದೆ.

Author:

...
Sub Editor

ManyaSoft Admin

share
No Reviews