ಪಾವಗಡ :
ನಿನ್ನೆ ಪಾವಗಡದಲ್ಲಿ ಶಾಸಕ ವೆಂಕಟೇಶ್ ನೇತೃತ್ವದಲ್ಲಿ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ 1 ನೇ ತ್ರೈಮಾಸಿಕ ಕೆಡಿಪಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಹಾಜರಿದ್ದರು. ಈ ಸಭೆಗೆ ಬಂದಿದ್ದ ಅಧಿಕಾರಿಗಳು ಶಾಸಕರು ಕೇಳಿದ ಮಾಹಿತಿಯನ್ನು ನೀಡದೆ ತಡವರಿಸಿದರು, ಇದರಿಂದ ರೊಚ್ಚಿಗೆದ್ದ ಶಾಸಕ ವೆಂಕಟೇಶ್ ಅಧಿಕಾರಿಗಳನ್ನು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕೆಡಿಪಿ ಸಭೆಯಲ್ಲಿ ಶಾಸಕ ವೆಂಕಟೇಶ್ ಅವರು ಬೆಸ್ಕಾಂ ಎಇಇ ಕೃಷ್ಣಮೂರ್ತಿ ಅವರನ್ನು ನೀನು ಕೆಲಸ ಮಾಡಿರೋ ಊರುಗಳ ಹೆಸರು ಹೇಳು ಅಂತ ಕೇಳಿದ್ದಾರೆ, ಈ ವೇಳೆ ಉತ್ತರ ಕೊಡಲು ಎಇಇ ತಡವರಿಸಿದ್ದು, ಶಾಸಕರು ಗರಂ ಆಗಿ ನೀನು ಕೆಲಸ ಮಾಡಿದ್ದರೆ ತಾನೇ ಊರಿನ ಹೆಸರು ಗೊತ್ತಿರೋದು ಎಂದಿದ್ದು, ಮತ್ತೇ ಕಥೆ ಹೇಳ್ತಿಯಾ ಎಇಇ ಹುದ್ದೆಗೆ ನೀನು ಅನ್ ಫಿಟ್ ಮ್ಯಾನ್ ಎಂದಿದ್ದಾರೆ, ಅಲ್ದೇ ಸಭೆಯಲ್ಲಿ ಮಾಹಿತಿ ಇಲ್ಲದೆ ಬಂದು ಈ ತರ ಉತ್ತರ ನೀಡೋದು ಸರಿನಾ ಎಂದು ಎಇಇಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
1 ಒಂದನೇ ತ್ರೈಮಾಸಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮೊದಲಿಗೆ ಎಇಇಯನ್ನ ಅವರು ಮಾಡಿರೋ ಕೆಲಸಗಳ ಬಗ್ಗೆ ಕೇಳಿದರು. ಆದರೆ ತಾವು ಮಾಡಿರೋ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ತಡವರಿಸಿದ್ದಕ್ಕೆ ಶಾಸಕರು ಗರಂ ಆದರು. ನಂತರ ರೈತರಿಗೆ ಕೊಡೋ ಟಿಸಿಗಳಿಗೆ 1 ಲಕ್ಷ ಇದ್ದರೆ, ನೀನು ರೈತರ ಬಳಿ ಎರಡೂವರೆ ಲಕ್ಷ ವಸೂಲಿ ಮಾಡ್ತಿದ್ದೀಯ ಇದು ಸರಿನಾ. ನಿಮ್ಮಂತವರಿಂದಲೇ ಇಲಾಖೆಗೆ ಕೆಟ್ಟ ಹೆಸರು. ನಿಮ್ಮಿಂದ ಇವತ್ತು ರೈತರು ಹಾಳಾಗ್ತಿದಾರೆ ಅಂತ ಕಿಡಿಕಾರಿದರು.
ಇನ್ನು ನೋಂದಣಿ ಅಧಿಕಾರಿ ರಾಧಾ ಅವರು ಗೈರು ಹಾಜರಿಯ ವಿಚಾರವಾಗಿ ಕೆಂಡಮಂಡಲರಾದ ಶಾಸಕರು ಆಕೆಗೆ ಇರುವ ದುರಹಂಕಾರ ಯಾರಿಗೂ ಇಲ್ಲ. ಸಂಬಂಧಪಟ್ಟ ಇಲಾಖೆಗೆ ಹಾಗೂ ಸಚಿವರಿಗೆ ಈಗಲೇ ಆಕೆಯ ವಿರುದ್ಧ ದೂರು ಅರ್ಜಿ ಸಲ್ಲಿಸಬೇಕೆಂದು ಸೂಚಿಸಿದರು.