ಶಿರಾ :
ಶಿರಾ ತಾಲೂಕಿನ ಕಸಬಾ ಹೋಬಳಿಯ ಪಂಜಿಗಾನಹಳ್ಳಿ ಗ್ರಾಮದಲ್ಲಿ ನೂತನ ಆರೋಗ್ಯ ಹಾಗೂ ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಾಸಕ ಟಿ.ಬಿ ಜಯಚಂದ್ರ ಗುದ್ದಲಿ ಪೂಜೆ ನೆರವೇರಿಸಿದರು. ಈ ವೇಳೆ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಿದೇವಿ, ತಾಲ್ಲೂಕು ಆರೋಗ್ಯಾಧಿಕಾರಿ ಸಿದ್ದೇಶ್ವರ, ವೈದ್ಯಾಧಿಕಾರಿ ಶ್ರೀಕಾಂತ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಸೇರಿ ಹಲವಾರು ಮಂದಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಶಾಸಕ ಜಯಚಂದ್ರ, ಹಿಂದಿನ ಕಾಲದಲ್ಲಿ ತಮಗೆ ಇಷ್ಟ ಬಂದ ರೀತಿಯಲ್ಲಿ ಆಹಾರ ಸೇವನೆ ಮಾಡಿ ಆರೋಗ್ಯವಾಗಿದ್ದರು. ಆದರೆ ಇಂದು ತೂಕ ಮಾಡಿ ಊಟ ತಿಂತಾ ಇದ್ದರು ಜನರು ಆರೋಗ್ಯವಾಗಿಲ್ಲ. ಊಟ ಹೆಚ್ಚಾದರೆ ಒಂದು ಸಮಸ್ಯೆ, ಕಡಿಮೆಯಾದರೆ ಮತ್ತೊಂದು ಸಮಸ್ಯೆ ಎದುರಿಸುತ್ತಿದ್ದೇವೆ. ಇದಕ್ಕೆ ನಮ್ಮ ಆಹಾರ ಧಾನ್ಯಗಳೇ ಕಾರಣವಾಗಿವೆ ಎಂದರು.
ಇನ್ನು ನಮ್ಮ ತಾತ, ಮುತ್ತಾತರ ಕಾಲದಿಂದಲೂ ಜಮೀನುಗಳಲ್ಲಿ ತಾವು ಬೆಳೆದ ತರಕಾರಿ, ದವಸ ಧಾನ್ಯಗಳಿಂದಲೇ ಅಡುಗೆ ಮಾಡಿ ಊಟ ಮಾಡುತ್ತಿದ್ದರು. ಜಮೀನುಗಳಲ್ಲಿ ಚೆನ್ನಾಗಿ ದುಡಿಮೆ ಮಾಡುತ್ತಿದ್ದರು. ಅವರ ಆಯಸ್ಸು 100 ವರ್ಷಕ್ಕೂ ಅಧಿಕವಾಗಿತ್ತು. ಆದರೆ, ಇಂದು ನಮ್ಮ ಆಯಸ್ಸು 60 ವರ್ಷ ದಾಟುವುದೇ ಕಷ್ಟವಾಗುತ್ತಿದೆ. ಸಣ್ಣ ವಯಸ್ಸಿಗೆ ಬಿಪಿ, ಶುಗರ್, ಹೃದಯಾಘಾತದಂತಹ ಹತ್ತಾರು ಕಾಯಿಲೆಗಳು ಬರ್ತಾ ಇವೆ. ಸಮಸ್ಯೆ ಪರಿಹಾರ ಹುಡುಕುವ ಬದಲು ಕಾಯಿಲೆ ಬಂದಾಗ ವೈದ್ಯರಿಗೆ ತೋರಿಸುವುದು, ಔಷಧಿ ಪಡೆದುಕೊಳ್ಳುವುದಷ್ಟೇ ಪರಿಹಾರವಾಗಿದೆ ಎಂದು ಜಯಚಂದ್ರ ಸಲಹೆ ನೀಡಿದರು.