ತುಮಕೂರು : ನಿನ್ನೆ ತುಮಕೂರಿನಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಮೆಗಾ ರೇಡ್ ನಡೆಸಿದ್ದು, ಭ್ರಷ್ಟ ಅಧಿಕಾರಿಗೆ ಚಳಿ ಬಿಡಿಸಿದ್ರು. ಹೌದು ತುಮಕೂರು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾಗಿರೋ ರಾಜಶೇಖರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದ ಬೆನ್ನಲ್ಲೇ ನಿನ್ನೆ 15ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ರಾಜಶೇಖರ್‌ಗೆ ಸಂಬಂಧಿಸಿದ 6 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ರು. ರಾಜಶೇಖರ್ ಮನೆ ಮೇಲೆ ನಡೆದ ದಾಳಿ ವೇಳೆ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾಗಿರೋ ರಾಜಶೇಖರ್ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ನಿನ್ನೆ ಬೆಳಗ್ಗೆಯಿಂದಲೂ ಸಂಜೆವರೆಗೂ ಮನೆಯ ಇಂಚಿಚೂ ಬಿಡದೇ ಶೋಧ ನಡೆಸಿದ್ರು. ಆಸ್ತಿ ಸಂಬಂಧ ಕೆಲವು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದು, ರಾಜಶೇಖರ್ ಹಲವೆಡೆ 12 ನಿವೇಶನ, 4 ವಾಸದ ಮನೆಗಳು, 4 ಎಕರೆ ಕೃಷಿ ಭೂಮಿ ಹೊಂದಿರೋ ಬಗ್ಗೆ ಮಾಹಿತಿ ಸಿಕ್ಕಿದೆ. ಅಲ್ದೇ ಮನೆಯಲ್ಲಿ ಸುಮಾರು 11 ಲಕ್ಷದ 66 ಸಾವಿರ ನಗದು ಹಾಗೂ 89 ಲಕ್ಷದ 6 ಸಾವಿರದ ಮೌಲ್ಯದ ಚಿನ್ನಾಭರಣ ಕೂಡ ಪತ್ತೆಯಾಗಿದೆ. ಇದಲ್ಲದೆ ಸುಮಾರು 37 ಲಕ್ಷದ 92 ಸಾವಿರ ಮೌಲ್ಯದ ವಿವಿಧ ವಾಹನಗಳು ಹಾಗೂ ಬ್ಯಾಂಕ್ ಖಾತೆಗಳಲ್ಲಿ 19 ಲಕ್ಷದ 11 ಸಾವಿರ ಹಣ ಇರೋದು ಪತ್ತೆಯಾಗಿರೋ ಬಗ್ಗೆ ಲೋಕಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಅಧಿಕಾರಿ ರಾಜಶೇಖರ್ ಮನೆಯಲ್ಲಿ ಆಸ್ತಿಗಳ ಜೊತೆಗೆ 26.87 ಲಕ್ಷ ಮೌಲ್ಯದ ಇತರೆ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳೂ ಕೂಡ ಪತ್ತೆಯಾಗಿದೆ. ನಿರ್ಮಿತಿ ಯೋಜನಾ ನಿರ್ದೇಶಕ ರಾಜಶೇಖರ್ ಮನೆಯಲ್ಲಿ ಸಿಕ್ಕ ಆಸ್ತಿ ದಾಖಲೆಗಳು, ನಗದು ಚಿನ್ನಾಭರಣವನ್ನು ಸೀಜ್ ಮಾಡಿದ್ದಾರೆ.
ಒಟ್ನಲ್ಲಿ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿ ಕೋಟಿ ಕೋಟಿ ಆಸ್ತಿಯ ಒಡೆಯನಾಗಿದ್ದ ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜಶೇಖರ್‌ಗೆ ಲೋಕಾ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ರಾಜಶೇಖರ್ ಮನೆಯಲ್ಲಿದ್ದ ಅಕ್ರಮ ಆಸ್ತಿ ಸಂಬಂಧ ದಾಖಲೆಗಳು, ಹಣ ಸೀಜ್ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಯಾವ ರೀತಿ ಅವರ ಮೇಲೆ ಕ್ರಮ ಕೈಗೊಳ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.