ಶಿರಾ:
ಶಿರಾ ನಗರ ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿದ್ದರು, ಕೂಡ ಈ ತಾಲೂಕಿನ ಹಳ್ಳಿಗಳು ಶೋಚನೀಯ ಸ್ಥಿತಿಯಲ್ಲಿವೆ. ಶಿರಾ ತಾಲೂಕಿನ ಹಳ್ಳಿ- ಹಳ್ಳಿಗಳಲ್ಲಿನ ಜನರಿಗೆ ಸರಿಯಾಗಿ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಗ್ರಾಮಗಳ ಸಮಸ್ಯೆಗಳು ಪ್ರಜಾಶಕ್ತಿ ಟಿವಿಯ ನಮ್ಮ ನಡೆ ನಿಮ್ಮೂರ ಕಡೆ ಅಭಿಯಾನದಲ್ಲಿ ಬಯಲಾಗಿದೆ. ಹೌದು ಈ ವಾರ ಪ್ರಜಾಶಕ್ತಿ ಟಿವಿ ಶಿರಾ ತಾಲೂಕಿನಲ್ಲಿ ಸಂಚಾರ ಮಾಡಿದ್ದು, ಗ್ರಾಮಗಳ ಸಮಸ್ಯೆಗಳ ಮೇಲೆ ಪ್ರಜಾಶಕ್ತಿ ಬೆಳಕು ಚೆಲ್ಲಿದೆ.
ಶಿರಾ ತಾಲೂಕಿನ ಸೀಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೆತ್ತಪ್ಪನಹಟ್ಟಿ ಗ್ರಾಮದಲ್ಲಿ ಪ್ರಜಾಶಕ್ತಿ ಸಂಚಾರ ಮಾಡಿದ್ದು, ಗ್ರಾಮದಲ್ಲಿ ಹಲವು ಸಮಸ್ಯೆಗಳು ಇದ್ದು, ಗ್ರಾಮಸ್ಥರು ಅಧಿಕಾರಿಗಳು, ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆತ್ತಪ್ಪನಹಟ್ಟಿ ಗ್ರಾಮಕ್ಕೆ ಮುಖ್ಯವಾಗಿ ಬೇಕಾಗಿರೋ ರಸ್ತೆ ಆಗಲಿ, ಬಸ್ ಸಂಪರ್ಕ ಆಗಲಿ ಅಥವಾ ನೀರಿನ ಸೌಲಭ್ಯ ಜೊತೆಗೆ ಚರಂಡಿ ವ್ಯವಸ್ಥೆ ಇಲ್ಲದೇ ಜನರು ಪರದಾಡುವಂತಾಗಿದೆ. ಈ ಗ್ರಾಮಕ್ಕೆ ಸುಮಾರು ವರ್ಷಗಳಿಂದ ಬಸ್ ವ್ಯವಸ್ಥೆ ಇಲ್ಲದೇ ಗ್ರಾಮಸ್ಥರಿಗೆ ಕಾಲುಗಳೇ ಗಟ್ಟಿಯಾಗಿದೆ. ಸುಮಾರು ಐದಾರು ಕಿಲೋ ಮೀಟರ್ ನಡೆದುಕೊಂಡೆ ಜನರು ಹೋಗಬೇಕಾಗಿದ್ದು, ನೆರೆ ಹೊರೆಯವರ ಗಾಡಿಗಳನ್ನು ಆಶ್ರಯಿಸಿದ್ದಾರೆ.
ಇನ್ನು ರಾಜಕಾರಣಿಗಳು ಎಲೆಕ್ಷನ್ ಬಂದಾಗ ಮಾತ್ರ ಬಂದು ದುಡ್ಡು ಕೊಟ್ಟು ವೋಟ್ ಕೇಳ್ತಾರೆ. ಗೆದ್ದ ಮೇಲೆ ಇತ್ತ ಸುಳಿಯೋದೆ ಇಲ್ಲ. ನಮ್ಮ ಗ್ರಾಮದಲ್ಲಿ ಚರಂಡಿ ಇಲ್ಲ, ಬಸ್ ಇಲ್ಲ ನಮಗೆ ತುಂಬಾ ಕಷ್ಟ ಆಗ್ತಿದೆ. ಬಸ್ ಇಲ್ಲದಿರೋದರಿಂದ ಶಾಲಾಮಕ್ಕಳು ಶಾಲಾಕಾಲೇಜಿಗೆ ಹೋಗಲು ತುಂಬಾ ಸಮಸ್ಯೆ ಆಗ್ತಿದೆ. ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತೀವಿ ಅಂತಾರೆ ಆದರೆ ನಮ್ಮ ಕಡೆ ನೋಡೆದೇ ಇಲ್ಲ ಎಂದು ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಯಾದ ಜಲಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ನೀರು ತಲುಪಿಸಲು ಸರ್ಕಾರ ಮುಂದಾಗಿದೆ. ಆದರೆ ಮನೆ ಮನೆಗಳ ಬಳಿ ಪೈಪ್ಗಳನ್ನು ಹಾಕಿ ಬಿಟ್ಟು ಸುಮಾರು ದಿನಗಳಾಗಿದೆ. ಆದರೆ ನಲ್ಲಿಯೂ ಇಲ್ಲ, ನೀರು ಬರ್ತಾ ಇಲ್ಲ. ಪೈಪ್ಗಳನ್ನು ಹಾಕಿ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಕಿಡಿಕಾರುತ್ತಿದ್ದಾರೆ. ಶಿರಾ ತಾಲೂಕಿನ ಹಳ್ಳಿ- ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದ್ದು, ಶಾಸಕರು ತಮ್ಮ ಕ್ಷೇತ್ರದ ಜನರನ್ನು ನಿರ್ಲಕ್ಷ್ಯಸಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಸ್ಥರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕಿದೆ.