ಬಾಗಲಕೋಟೆ : ಮಂಗನಿಂದ ಮಾನವ ಎನ್ನುವ ಮಾತು ಅರ್ಥಪೂರ್ಣವಾಗುವಂತಹ ಅಪರೂಪದ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೂಡೂರಿನಲ್ಲಿ ನಡೆದಿದೆ. ಇಲ್ಲಿನ ಎಸ್ಸಿ ಪಶು ಆಸ್ಪತ್ರೆಯಲ್ಲಿ ಒಂದು ಮಂಗನ ವಿಚಿತ್ರ ಹಾಗೂ ಮನವೊಲಿಸುವ ವರ್ತನೆ ಎಲ್ಲರ ಗಮನ ಸೆಳೆದಿದೆ.
ತೀವ್ರ ವೇದನೆಯಲ್ಲಿ ಇದ್ದ ಒಂದು ಮಂಗ, ಯಾರೂ ಕರೆಸಿಲ್ಲದೆ ಸ್ವತಃ ಆಸ್ಪತ್ರೆ ಬಂದು, ಕೈ ಸನ್ನೆ ಮೂಲಕ ತನ್ನ ನೋವನ್ನು ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದಿದೆ. ಗುಡೂರಿನ ಎಸ್ಸಿ ಪಶು ಆಸ್ಪತ್ರೆಯ ಸಿಬ್ಬಂದಿ ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿದ್ದಾಗ, ಅಚಾನಕ್ ಒಂದು ಮಂಗ ನೇರವಾಗಿ ಆಸ್ಪತ್ರೆ ಪ್ರವೇಶಿಸಿತು. ತಾನು ನೋವಿನಲ್ಲಿ ಇದ್ದುದನ್ನು ತೋರಿಸಲು ಮಂಗ ತನ್ನ ಗುದದ್ವಾರದ ಭಾಗಕ್ಕೆ ಕೈ ತೋರಿಸಿ ಸನ್ನೆಯ ಮೂಲಕ ವ್ಯಥೆ ವ್ಯಕ್ತಪಡಿಸಿತು.
ಈ ಘಟನೆ ಕಂಡ ಪಶುವೈದ್ಯಕೀಯ ಪರಿವೀಕ್ಷಕ ಜಿಜಿ ಬಿಲ್ಲೋರ್ ಅವರು ತಕ್ಷಣ ಪ್ರತಿಕ್ರಿಯಿಸಿ ಕೋತಿಗೆ ತಕ್ಕ ಚಿಕಿತ್ಸೆ ನೀಡಿದ್ದಾರೆ. ಇಂತಹ ದ್ದೊಂದು ಘಟನೆ ನಮ್ಮ ಜೀವನದಲ್ಲಿ ಮೊದಲ ಬಾರಿಗೆ ಕಂಡದ್ದು. ಕೋತಿಯ ಬುದ್ಧಿವಂತಿಕೆ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸಿದೆ ಎಂದು ಅವರು ಹೇಳಿದ್ದಾರೆ.
ಮಂಗನ ಈ ನಡೆ ಸ್ಥಳೀಯ ಜನರಲ್ಲೂ ಬಹುಮಾನ ಸಿಕ್ಕಿದೆ. ಇದು ಕೇವಲ ಒಂದು ಮಂಗದ ಘಟನೆ ಅಲ್ಲ. ಪ್ರಾಣಿಗಳಿಗೂ ಸಂಕಟ ಹೇಳುವ ಸಾಮರ್ಥ್ಯವಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ, ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪಶು ವೈದ್ಯರ ಸಮಯಪ್ರಜ್ಞೆ ಹಾಗೂ ಕರುಣೆ ಕೂಡ ಜನರ ಮನಸ್ಸನ್ನು ಗೆದ್ದಿದೆ. ಚಿಕಿತ್ಸೆ ಬಳಿಕ ಮಂಗ ನಿಶ್ಚಿಂತರಾಗಿ ಆಸ್ಪತ್ರೆಯಿಂದ ಹೊರಟು ಹೋಗಿದ್ದು, ಎಲ್ಲರ ಮುಖದಲ್ಲಿ ಸಂತೋಷ ಮೂಡಿಸಿದೆ. ಈ ಅಪರೂಪದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.