ಕೆಆರ್‌ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಾಸಿರ್ ಪಾಷ ಎಂಬುವವರ ಕೊಲೆ ಪ್ರಕರಣ ಸಂಬಂಧ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ಶ್ರೀರಂಗಪಟ್ಟಣದ ಮೂರನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಅಕ್ಕಿಹೆಬ್ಬಾಳು ಗ್ರಾಮದ ನಾಸಿರ್ ಪಾಷಾ ಎಂಬುವವರನ್ನು ಆತನ ಹೆಂಡತಿ ಅಂಜುಮ್ ಆರಾ ಹಾಗೂ ಆಕೆಯ ಪ್ರಿಯಕರ ರಹೀಂಖಾನ್‌ನನ್ನು ಕೊಲೆ ಮಾಡಿದ್ದರು. ಈ ಬಗ್ಗೆ 2021 ನವೆಂಬರ್ 26 ರಂದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಗ್ರಾಮಾಂತರ ಇನ್ಸ್‌ಪೆಕ್ಟರ್ ಕೆ.ಎಸ್ ನಿರಂಜನ್ ಪ್ರಕರಣ ದಾಖಲಿಸಿಕೊಂಡು ದೋಷಾರೋಣ ಪಟ್ಟಿ ಸಲ್ಲಿಸಿದರು. ಪ್ರಕರಣ ವಿಚಾರಣೆ ನಡೆಸಿದ ಕೋರ್ಟ್ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ ಅವರಿದ್ದ ಪೀಠ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೇ ಮೊದಲ ಆರೋಪಿ ಅಂಜುಮ್ ಆರಾಗೆ 10,000 ರೂ. ದಂಡ ಹಾಗೂ 3ನೇ ಆರೋಪಿ ರಹೀಂ ಖಾನ್ ಗೆ 15,000 ದಂಡ ವಿಧಿಸಿದೆ. ಈ ಪ್ರಕರಣದಲ್ಲಿ ಅಂಜುಮ್ ಆರಾಳ ಪ್ರಿಯತಮನಾಗಿರುವ 2ನೇ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.