ಮಂಡ್ಯ:
ಗೂಡ್ಸ್ ಆಟೋ ಓವರ್ ಟೇಕ್ ವಿಚಾರಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸಾಮ್ಕಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೃತ ಕುಮಾರ್ ಮತ್ತು ಹಲ್ಲೆ ನಡೆಸಿದ್ದ ಎಲ್ಲರೂ ಸಹ ಗೂಡ್ಸ್ ಆಟೋ ಚಾಲಕರಾಗಿದ್ದು, ಗೂಡ್ಸ್ ಆಟೋ ಓವರ್ ಟೇಕ್ ಮಾಡಿದ ವಿಚಾರಕ್ಕೆ ಜಗಳವುಂಟಾಗಿದೆ. ಈ ವೇಳೆ ಕುಮಾರ್ ಗೆ ಚಾಕುವಿನಿಂದ ಇರಿಯಲಾಗಿದೆ. ನಾಲ್ಕೈದು ಕಡೆ ಚುಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ ಅನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕುಮಾರ್ ಸಾವನ್ನಪ್ಪಿದ್ದಾನೆ.
ಯುವಕನಿಗೆ ಚಾಕು ಇರಿದು ಎಸ್ಕೇಪ್ ಆಗುತ್ತಿದ್ದ ಪಾಂಡವಪುರದ ಕಾಳೇನಹಳ್ಳಿಯ ಮೂವರು ಯುವಕರನ್ನು ಗ್ರಾಮಸ್ಥರು ಅಟ್ಟಾಡಿಸಿ ಹಿಡಿದು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ. ಘಟನೆ ಕುರಿತು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.