ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮತುಮಕೂರು
ಮಧುಗಿರಿ:
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಅಂಧ ಗಾಯಕಿ ಮಂಜಮ್ಮ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಗಾಯಕಿ ಮಂಜಮ್ಮ ಅಗಲಿಕೆಯಿಂದ ಕುಟುಂಬ ಕಂಗಾಲಾಗಿದ್ದು, ಅಂಧ ಸಹೋದರಿ ರತ್ನಮ್ಮ ಕಣ್ಣೀರಾಕುತ್ತಿದ್ದಾರೆ.
ಮಂಜಮ್ಮ ಮಧುಗಿರಿ ತಾಲೂಕಿನ ಡಿ.ವಿ ಹಳ್ಳಿಯ ಗ್ರಾಮದವರಾಗಿದ್ದಾರೆ. ಅಂಧ ಸಹೋದರಿಯಾರಾದ ಮಂಜಮ್ಮ ಹಾಗೂ ರತ್ನಮ್ಮ ಇಬ್ಬರು ಸಂಗೀತ ಕಲಿತಿರಲಿಲ್ಲ, ಆದರೆ ಹೊಟ್ಟೆಪಾಡಿಗಾಗಿ ಹಾಡಲು ಆರಂಭಿಸಿದರು. ಬಳಿಕ ಗಾಯನವೇ ಅವರ ವೃತ್ತಿಯಾಗಿ ಮಾಡಿಕೊಂಡು ದಂಡಿಮಾರಮ್ಮ ದೇವಸ್ಥಾನದ ಮುಂದೆ ಹಾಡು ಹೇಳಿ ರಂಜಿಸುತ್ತಿದ್ದರು. ಇವರ ಪ್ರತಿಭೆಯನ್ನು ನೋಡಿದ ಜೀ ಕನ್ನಡ ಇವರಿಗೆ ಸರಿಗಮಪ ವೇದಿಕೆಯಲ್ಲಿ ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು.
ಸರಿಗಮಪ ಸಿಂಗಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಇವರು ಜನರ ಮನಸ್ಸನ್ನು ಗೆದ್ದಿದ್ದರು. ಇದೀಗ ಮಂಜಮ್ಮ ನಿಧನ ಹಿನ್ನೆಲೆಯಲ್ಲಿ ಸಹೋದರಿ ರತ್ನಮ್ಮ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಲ್ಲದೇ ಇವರ ಕಷ್ಟವನ್ನು ಅರಿತು ಇವರ ಕಂಠಕ್ಕೆ ಮನ ಸೋತಿದ್ದ ಹಿರಿಯ ನಟ ಜಗ್ಗೇಶ್ ಇವರಿಗೆ ಮನೆಯನ್ನು ಕೂಡ ಕಟ್ಟಿಸಿಕೊಟ್ಟಿದ್ದರು. ತಮ್ಮ ಗಾಯನದಿಂದಲೇ ಬದುಕು ಕಟ್ಟಿಕೊಂಡಿದ್ದ ಅಂಧ ಗಾಯಕಿ ಮಂಜಮ್ಮಗೆ ಅನೇಕರು ಸಂತಾಪ ಸೂಚಿಸಿದ್ದು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.