ಮಧುಗಿರಿ:
ಟಾಟಾ ಏಸ್ ವಾಹನಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ಪಲ್ಟಿಯಾಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಸೀಮಾಂದ್ರ ಗಡಿಭಾಗದ ಮುದ್ದೇನಹಳ್ಳಿ ಗೇಟ್ ಬಳಿ ನಡೆದಿದೆ.
12 ವರ್ಷದ ರೇವಂತ್ ಎಂಬ ಬಾಲಕ ಮೃತ ದುರ್ದೈವಿಯಾಗಿದ್ದಾನೆ. ದೊಡ್ಡದಾಳವಟ್ಟದಿಂದ ಹಿಂದೂಪುರದ ಸೆಡ್ಡಪಲ್ಲಿ ಕಡೆ ತೆರಳುತ್ತಿದ್ದ ಟಾಟಾ ಏಸ್ ವಾಹನಕ್ಕೆ ಹಿಂಬದಿಯಿಂದ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ವಾಹನ ಪಲ್ಟಿಯಾಗಿದೆ. ಟಾಟಾ ಏಸ್ ಪಲ್ಟಿಯಾದ ಪರಿಣಾಮ ಟಾಟಾ ಏಸ್ ನಲ್ಲಿದ್ದ ರೇವಂತ್ ಸಾವನ್ನಪ್ಪಿದ್ದಾನೆ. ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಕ್ಯಾಂಟರ್ ವಾಹನ ಚಾಲಕ ಮತ್ತು ನಿರ್ವಾಹಕ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಕೋಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿದು ಕೋಡಿಗೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹವನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.