ಕೊಡಿಗೇನಹಳ್ಳಿ ಪೊಲೀಸ್ ಠಾಣೆತುಮಕೂರು
ಮಧುಗಿರಿ :
ಮಧುಗಿರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳ್ಳರ ಗ್ಯಾಂಗ್ ಆಕ್ಟಿವ್ ಆಗಿದ್ದು , ಜನರ ನಿದ್ದೆಗೆಡಿಸುವಂತಾಗಿದೆ. ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಹಳೆತಿಮ್ಮನಹಳ್ಳಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕಳ್ಳರು ಕದ್ದು ಎಸ್ಕೇಪ್ ಆಗಿದ್ದರು. ಈ ಘಟನೆ ನಡೆದು ಕೇವಲ ಒಂದೇ ಗಂಟೆಯಲ್ಲಿ ಖದೀಮರನ್ನು ಲಾಕ್ ಮಾಡುವಲ್ಲಿ ಕೊಡಿಗೇನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ .
ಹಳೆ ತಿಮ್ಮನಹಳ್ಳಿಯ ಲಿಖಿತಾ ಎಂಬುವವರು ತಮ್ಮ ಜಮೀನಿನಲ್ಲಿ ಹೂವು ಬಿಡಿಸುತ್ತಿದ್ದರು , ಈ ವೇಳೆ ಇಬ್ಬರು ಐನಾತಿ ಖದೀಮರು ಆಕೆಯ ಮೈ ಮೇಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕದ್ದು ಎಸ್ಕೇಪ್ ಆಗಿದ್ರು . ತಕ್ಷಣ ಈ ಘಟನೆ ಬಗ್ಗೆ ಲಿಖಿತಾ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ರು , ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಒಂದೇ ಗಂಟೆಯಲ್ಲಿ ಕಳ್ಳರನ್ನು ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ . ಮಧುಗಿರಿ ಪಟ್ಟಣದ ಗೌರಿಬಿದನೂರು ರಸ್ತೆಯ ತ್ಯಾಜ್ಯ ವಿಲೇವಾರಿ ಘಟಕದ ಬಳಿ ನಡೆದುಕೊಂಡು ಹೋಗುತಿದ್ದ ಇಬ್ಬರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಚಿನ್ನದ ಸರ ಪತ್ತೆಯಾಗಿದೆ. ಅಲ್ಲದೇ ಕಳ್ಳತನದ ವೇಳೆ ಮಹಿಳೆಗೆ ಕೆಲ ಗಾಯಗಳಾಗಿದ್ದು , ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೊಡ್ಡೇರಿಯ ನಿರಂಜನ್ (25 ವರ್ಷ) ಹಾಗೂ ಹಳೆ ತಿಮ್ಮನಹಳ್ಳಿಯ ಉದಯ್ ಕುಮಾರ್ ಬಂಧಿತ ಖದೀಮರಾಗಿದ್ದಾರೆ. ಇನ್ನು ಒಂದೇ ಗಂಟೆಯಲ್ಲಿ ಕಳ್ಳರನ್ನು ಹಿಡಿದಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಕೊಡಿಗೇನಹಳ್ಳಿ ಪೊಲೀಸರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.