ಮಧುಗಿರಿ : ಇಂಜಿನಿಯರ್ ಮನೆಮುಂದೆ ಬಿದ್ದಿರುವ ಕಬ್ಬಿಣ ಯಾರಿಗೆ ಸೇರಿದ್ದು?

ಮಧುಗಿರಿ :  ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತವೆ. ಇಂತಹ ಇಲಾಖೆಯ ಕಾಮಗಾರಿಗೆ ಬಳಸುವ ಕಬ್ಬಿಣವು ಟನ್‌ಗಟ್ಟಲೆ ಇಂಜಿನಿಯರ್‌ ಒಬ್ಬರ ಮನೆಯ ಮುಂದೆ ಬಿದ್ದಿದ್ದು, ಸಾರ್ವಜನಿಕರಲ್ಲಿ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಮಧುಗಿರಿಯ KRIDL ಇಂಜಿನಿಯರ್‌ ಮಹದೇವ್ ವಾಸವಿರುವ ಮನೆಯ ಮುಂಭಾಗ ಟನ್‌ಗಟ್ಟಲೇ ಕಬ್ಬಿಣ ಬಿದ್ದಿದ್ದು, ಜನರಲ್ಲಿ ಹಲವು ಅನುಮಾನ ಮೂಡುವಂತೆ ಮಾಡಿದೆ. ಕೆಆರ್‌ಐಡಿಎಲ್‌ ಇಲಾಖೆಯ ಮೂಲಕ ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಸಂಪರ್ಕ ಸೇತುವೆಗಳು, ಶಾಲೆಗಳು, ಆಸ್ಪತ್ರೆಗಳು, ಹಾಸ್ಟೆಲ್ ಗಳು, ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಆದರೆ, ಇಂಜಿನಿಯರ್‌ ಮನೆಯ ಮುಂಭಾಗ ಬಿದ್ದಿರುವ ಟನ್‌ಗಟ್ಟಲೇ ಕಬ್ಬಿಣವು ಸರ್ಕಾರಕ್ಕೆ ಸೇರಿದ್ದೋ, ಇಲ್ಲವೇ ಗುತ್ತಿಗೆದಾರನಿಗೆ ಸೇರಿದ್ದೋ ಅನ್ನೋ ಅನುಮಾನಗಳು ಕಾಡುತ್ತಿವೆ. 

ಕಾಮಗಾರಿ ವಸ್ತುಗಳನ್ನು ಸಂಗ್ರಹಿಸಲೆಂದೆ KRIDL ಇಲಾಖೆಗೆ ಸಂಬಂಧಪಟ್ಟ ಗೋಡನ್ ಇರುತ್ತೆ. ಒಂದು ವೇಳೆ ಇಲಾಖೆಗೆ ಸೇರಿದ ಕಬ್ಬಿಣವೇ ಆಗಿದ್ದರೆ ಇಲಾಖೆಗೆ ಸಂಬಂಧಪಟ್ಟ ಗೋಡೋನ್‌ ನಲ್ಲಿ ಹಾಕಬೇಕಿತ್ತು. ಆದರೆ ಇಂಜಿನಿಯರ್‌ ಮನೆ ಮುಂದೆ ಹಾಕಿರುವ ಕಬ್ಬಿಣ ಯಾರದ್ದು ಅನ್ನೋ ಪ್ರಶ್ನೆ ಮೂಡುತ್ತಿದೆ. KRIDL ಇಲಾಖೆಯವರು ಸಂಪೂರ್ಣವಾಗಿ ಕಾಮಗಾರಿಗೆ ಕಬ್ಬಿಣವನ್ನು ಬಳಸುತ್ತಿದ್ದಾರೋ? ಇಲ್ಲವೋ? ಅನ್ನೋ ಅನುಮಾನ ಕೂಡ ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿದೆ. ಈ ಸಂಬಂಧ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

Author:

...
Sushmitha N

Copy Editor

prajashakthi tv

share
No Reviews