ಮಧುಗಿರಿ:
ರಾಜ್ಯದ ಎರಡನೇ ಅತೀ ದೊಡ್ಡ ಜಿಲ್ಲೆ ಅನ್ನೋ ಹಣೆಪಟ್ಟಿಯನ್ನು ಹೊತ್ತುಕೊಂಡಿರುವ ತುಮಕೂರು ಜಿಲ್ಲೆಯಲ್ಲಿ ಬರೋಬ್ಬರಿ ೧೧ ವಿಧಾನಸಭಾ ಕ್ಷೇತ್ರಗಳಿವೆ. ಹೀಗಾಗಿ ಸಂಘಟನೆಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಬಿಜೆಪಿ ತುಮಕೂರಿನ ಜೊತೆಗೆ ಮಧುಗಿರಿಯನ್ನು ಸಂಘಟನಾತ್ಮಕ ಜಿಲ್ಲೆಯನ್ನಾಗಿ ಮಾಡಿಕೊಂಡಿದೆ. ಮಧುಗಿರಿ, ಕೊರಟಗೆರೆ, ಪಾವಗಡ ಮತ್ತು ಶಿರಾ ಈ ನಾಲ್ಕು ಕ್ಷೇತ್ರಗಳು ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತವೆ. ಆದರೆ ಸಮರ್ಥ ನಾಯಕರಿಲ್ಲದೇ ಈ ಭಾಗದಲ್ಲಿ ಕಮಲ ಪಾಳಯ ಸೊರಗುತ್ತಿತ್ತು. ಆದರೀಗ ಮಧುಗಿರಿ ಸಂಘಟನಾತ್ಮಕ ಜಿಲ್ಲೆಗೆ ಬಿಜೆಪಿ ತನ್ನ ನೂತನ ಸಾರಥಿಯನ್ನು ಆಯ್ಕೆ ಮಾಡಿದೆ. ವಿಧಾನ ಪರಿಷತ್ ಸದಸ್ಯ ಚಿದಾನಂದ್ ಗೌಡ ಅವರನ್ನು ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ಬಿಜೆಪಿ ಆಯ್ಕೆಮಾಡಿದ್ದು, ಕಾರ್ಯಕರ್ತರಲ್ಲಿ ನವೋತ್ಸಾಹ ಮೂಡುವಂತೆ ಮಾಡಿದೆ.
ಬರಪೀಡಿತ ತಾಲೂಕುಗಳನ್ನೇ ಒಳಗೊಂಡಿರೋ ಮಧುಗಿರಿ ಸಂಘಟನಾತ್ಮಕ ಜಿಲ್ಲೆ ಬಿಜೆಪಿ ಪಾಲಿಗೂ ಬರದ ನಾಡೇ ಅಂದರೂ ಕೂಡ ತಪ್ಪಾಗಲಿಕ್ಕಿಲ್ಲ. ಯಾಕಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಭಾವದಿಂದ ಈ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಸೊರಗುತ್ತಿದೆ. ಸೊರಗುತ್ತಿದೆ ಅನ್ನೋದಕ್ಕಿಂತ ಹೆಚ್ಚಾಗಿ ಒಂದು ರೀತಿಯಲ್ಲಿ ಮೂಲೆಗುಂಪಾಗಿದೆ ಅಂದರೂ ತಪ್ಪಾಗಲಿಕ್ಕಿಲ್ಲ. ಈ ನಾಲ್ಕೂ ಕ್ಷೇತ್ರಗಳಲ್ಲಿಯೂ ಬಿಜೆಪಿ ತನ್ನ ಖಾತೆಯನ್ನೇ ತೆರೆದಿರಲಿಲ್ಲ. ಆದರೆ ೨೦೨೦ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಜೇಶ್ ಗೌಡ ಭರ್ಜರಿ ಜಯಭೇರಿ ಬಾರಿಸೋ ಮೂಲಕ ಇತಿಹಾಸ ಬರೆದಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದಲ್ಲದೇ, ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ರು. ಸೋಲಿನ ಬಳಿಕ ರಾಜೇಶ್ ಗೌಡ ಕ್ಷೇತ್ರದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಇನ್ನು ಕೊರಟಗೆರೆಯಲ್ಲಿಯೂ ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮಧುಗಿರಿ, ಪಾವಗಡದಲ್ಲಂತೂ ಬಿಜೆಪಿ ಅಭ್ಯರ್ಥಿಗಳು ಠೇವಣಿಯನ್ನೇ ಕಳೆದುಕೊಂಡಿದ್ದರು. ಹೀಗಾಗಿ ಈ ಭಾಗದಲ್ಲಿ ಸಂಪೂರ್ಣ ಬಾಡಿಹೋಗಿದ್ದ ಕಮಲಕ್ಕೆ ಸಮರ್ಥ ನಾಯಕನ ಅಗತ್ಯವಿತ್ತು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸದ್ಯ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಗೌಡ ಅವರಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದೆ.
ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಚಿದಾನಂದ್ ಗೌಡ, ನಿಧಾನವಾಗಿ ರಾಜಕೀಯ ಪಟ್ಟುಗಳನ್ನು ಕೂಡ ಕರಗತ ಮಾಡಿಕೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ವಿಧಾನ ಸಭೆಯನ್ನು ಪ್ರವೇಶಿಸುವ ಗುರಿಯನ್ನ ಹೊತ್ತುಕೊಂಡಿದ್ದು, ಶಿರಾ ಕ್ಷೇತ್ರದಲ್ಲಿ ಸಾಕಷ್ಟು ಓಡಾಟ ನಡೆಸುತ್ತಿದ್ದಾರೆ. ಪಕ್ಷ ಸಂಘಟನೆಯಲ್ಲಿಯೂ ತೊಡಗಿಸಿಕೊಳ್ತಿದ್ದಾರೆ. ಇನ್ನು ಸದ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬೇರೆ ಬರ್ತಿವೆ. ಹೀಗಾಗಿ ಈ ಪರಿಸ್ಥಿತಿಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವುದು ಅಷ್ಟು ಸುಲಭದ ಮಾತಲ್ಲ ಅನ್ನೋದು ರಾಜ್ಯ ನಾಯಕರುಗಳಿಗೂ ಗೊತ್ತು. ಹೀಗಾಗಿ ಅಳೆದು ತೂಗಿ ಚಿದಾನಂದ್ ಗೌಡ ಅವರಿಗೆ ಪಟ್ಟ ಕಟ್ಟಿದೆ ಬಿಜೆಪಿ.
ಒಟ್ಟಿನಲ್ಲಿ ಸಮರ್ಥ ನಾಯಕರಿಲ್ಲದೇ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ನೂತನ ಸಾರಥಿಯಾಗಿರುವ ಚಿದಾನಂದ್ ಗೌಡ ಈ ಭಾಗದ ನಾಯಕರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ್ತಾರಾ? ಕಾರ್ಯಕರ್ತರಲ್ಲಿ ನವಚೈತನ್ಯ ತುಂಬಿ ಪಕ್ಷಕ್ಕೆ ಬಲವಾದ ತಳಪಾಯ ಹಾಕಿಕೊಡ್ತಾರಾ? ಅನ್ನೋದನ್ನು ಕಾದುನೋಡ ಬೇಕಿದೆ.