ಮಧುಗಿರಿ:
ತುಮಕೂರು ಜಿಲ್ಲೆಯಲ್ಲಿ ಅಪರೂಪದ ಜಿಂಕೆ ಸಂತತಿ ಹೊಂದಿರೋ ಮಧುಗಿರಿ ತಾಲೂಕಿನ ಮೈದನಹಳ್ಳಿಯ ಜಯಮಂಗಲಿ ಕೃಷ್ಣಮೃಗ ವನ್ಯಧಾಮದಲ್ಲಿ ಸೂಕ್ತ ಸೌಲಭ್ಯ ಇಲ್ಲದೇ ಜಿಂಕೆಗಳ ಸಂತತಿ ಕ್ಷೀಣಿಸುತ್ತಿರೋದು ಆಘಾತ ಹುಟ್ಟಿಸುವಂತಾಗಿದೆ. ಇದೇ ಸ್ಥಿತಿ ಮುಂದುವರಿದರೆ ಕೃಷ್ಣಮೃಗಗಳ ಸಂತಾನ ಕಣ್ಮರೆಯಾಗಬಹುದೇನೋ ಎಂಬ ಆತಂಕ ವ್ಯಕ್ತವಾಗ್ತಿದೆ.
ರಾಜ್ಯದ ಎರಡನೇ ಅತಿದೊಡ್ಡ ಕೃಷ್ಣಮೃಗ ವನ್ಯಧಾಮ ಎಂಬ ಹೆಗ್ಗಳಿಕೆಗೆ ಹೆಸರಾಗಿರೋ ಜಯಮಂಗಲಿ ಕೃಷ್ಣಮೃಗ ಧಾಮದಲ್ಲಿ ಕೃಷ್ಣಮೃಗಗಳ ಬದುಕು ಹೇಳತೀರದ್ದಾಗಿದೆ. ಇಲ್ಲಿನ ಜಿಂಕೆಗಳನ್ನು ಕಣ್ತುಂಬಿಕೊಳ್ಳಲು ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದ ಪ್ರವಾಸಿಗರು ಬಂದು, ಗುಂಪು ಗುಂಪಾಗಿ ಕಾಣೋ ಜಿಂಕೆಗಳನ್ನು ಕಂಡು ಸಂಭ್ರಮಿಸುತ್ತಿದ್ದರು. ಆದರೆ ಇತ್ತೀಚೆಗೆ ಸರಿಯಾದ ನಿರ್ವಹಣೆ ಇಲ್ಲದೇ ಹಾಗೂ ಮೇವಿನ ಕೊರತೆಯಿಂದ ವನ್ಯಧಾಮ ಕಳೆಗುಂದಿದೆ. ಅರಣ್ಯ ಇಲಾಖೆಯಿಂದ ಕೃಷ್ಣಮೃಗಗಳಿಗಾಗಿ ನೀರಿನ ತೊಟ್ಟಿಗಳನ್ನೇನೋ ನಿರ್ಮಿಸಿದ್ದಾರೆ, ಆದರೆ ಅವುಗಳಿಗೆ ಬೇಕಾದ ಮೇವು ಮಾತ್ರ ಸಿಗ್ತಾ ಇಲ್ಲ. ಇನ್ನು ಇತ್ತೀಚೆಗೆ ವನ್ಯಧಾಮಕ್ಕೆ ಬೆಂಕಿ ತಗುಲಿ ಗಿಡಗಂಟೆಗಳ ಜತೆಗೆ ಹುಲ್ಲು ಹೊತ್ತಿ ಉರಿದ ಪರಿಣಾಮ ಕೃಷ್ಣ ಮೃಗಗಳು ಹೆದರಿ ತಂಗುದಾಣ ಮತ್ತು ವಿಶ್ರಾಂತಿ ಗೃಹದ ಬಳಿ ಬಾರದಂತಾಗಿವೆ.
ಇನ್ನು ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಗಾಳಿಗೆ ತೂರಿ ಈ ವನ್ಯಧಾಮದ ಸುತ್ತ ಪೌಲ್ಟ್ರಿಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ಜಿಂಕೆ ಸಂತತಿ ನಶೀಸುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಚಿಂತಕ ಡಾ.ಕೆ.ನರಸಿಂಹಯ್ಯ ಮಾತನಾಡಿ, ವನ್ಯಧಾಮ ಸುತ್ತ ಪೌಲ್ಟ್ರಿ ಫಾರಂಗಳ ನಿರ್ಮಾಣಗೊಂಡಿದ್ದು, ಇದರಿಂದ ಜಿಂಕೆ ಸಂತತಿ ನಶಿಸುತ್ತಿದೆ. ಅಧಿಕಾರಿಗಳು ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ಗಾಳಿಗೆ ತೂರಿ ಪೌಲ್ಟ್ರಿ ಫಾರಂಗೆ ಅನುಮತಿ ನೀಡಿದ್ದಾರೆ, ಇದರಿಂದ ಜಿಂಕೆ ಸಂತತಿ ಹಾಗೂ ವನ್ಯಧಾಮದ ಪ್ರಾಣಿ ಪಕ್ಷಿಗಳಿಗೆ ಅಪಾಯವಾಗುವ ಸಂಭವವಿದೆ. ಆದ್ದರಿಂದ ಕೂಡಲೇ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಶೀಘ್ರದಲ್ಲೇ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ಕರೆದು ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದರು.
ಒಂದು ಕಡೆ ಬಿರು ಬಿಸಿಲಿನಿಂದ ಪ್ರಾಣಿಸಂಕುಲ ಕಂಗಾಲಾಗಿ ಹೋಗ್ತಿದ್ರೆ, ಇನ್ನೊಂದು ಕಡೆ ವನ್ಯಧಾಮಗಳಲ್ಲಿಯೇ ಈ ತರಹದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸವೇ ಸರಿ.