ಮಧುಗಿರಿ: 50 ವರ್ಷಗಳ ಬಳಿಕ ಐತಿಹಾಸಿಕ ದಂಡಿನಮಾರಮ್ಮ ತೆಪ್ಪೋತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು

ಮಧುಗಿರಿ ಶ್ರೀ ದಂಡಿನ ಮಾರಮ್ಮ ತೆಪ್ಪೋತ್ಸವ
ಮಧುಗಿರಿ ಶ್ರೀ ದಂಡಿನ ಮಾರಮ್ಮ ತೆಪ್ಪೋತ್ಸವ
ತುಮಕೂರು

ಮಧುಗಿರಿ:

ಬರೋಬ್ಬರಿ 50 ವರ್ಷಗಳ ಬಳಿಕ ಐತಿಹಾಸಿಕ ಮಧುಗಿರಿಯ ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವ ಅದ್ದೂರಿಯಾಗಿ ಜರುಗಿತು. ಮಧುಗಿರಿಯ ಚೋಳೆನಕೆರೆಯಲ್ಲಿ ದಂಡಿನ ಮಾರಮ್ಮ ದೇವಿಯ ಉತ್ಸವ ಜರುಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉತ್ಸವದಲ್ಲಿ ಭಾಗಿಯಾಗಿದ್ದರು. ಸಚಿವ ಕೆ.ಎನ್‌ ರಾಜಣ್ಣ, ಪುತ್ರ ಎಂಎಲ್‌ಸಿ ರಾಜೇಂದ್ರ ಅವರ ನೇತೃತ್ವದಲ್ಲಿ ತೆಪ್ಪೋತ್ಸವ ನಡೆದಿದ್ದು, ಗೃಹ ಸಚಿವ ಪರಮೇಶ್ವರ್‌, ಸಿದ್ದಗಂಗಾ ಮಠದ ಶ್ರೀಗಳು ಸೇರಿ ಅನೇಕ ಮಂದಿ ಗಣ್ಯರು ತೆಪ್ಪೋತ್ಸವದಲ್ಲಿ ಭಾಗಿಯಾಗಿದ್ದರು.

ದಂಡಿನ ಮಾರಮ್ಮ ದೇವಿಯು ಮಧುಗಿರಿ ಭಾಗವನ್ನು ಕಾಪಾಡುವ ಶಕ್ತಿ ದೇವತೆಯಾಗಿದ್ದು, ದುರಂತದಿಂದಾಗಿ ತೆಪ್ಪೋತ್ಸವ ಸ್ಥಗಿತಗೊಳಿಸಲಾಗಿದ್ದು, ಅನೇಕ ಜನರು ತೆಪ್ಪೋತ್ಸವ ನಡೆದಿಲ್ಲ, ಈ ಬಾರಿ ನಡೆಸಬೇಕು ಎಂದು ಭಕ್ತರು ಒತ್ತಾಸೆ ಮಾಡಿದ್ದರು, ಭಕ್ತರ ಅಪೇಕ್ಷೆ, ಒತ್ತಾಸೆ ಮೇರೆಗೆ ಸಚಿವ ರಾಜಣ್ಣ ತೆಪ್ಪೋತ್ಸವ ನಡೆಸಲು ಮುಂದಾಗಿದ್ರು.

ಚೋಳೆನಕೆರೆಯಲ್ಲಿ ಗಂಗಾಪೂಜೆ ಹಾಗೂ ಬಾಗಿನ ಅರ್ಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಿದ್ದಗಂಗಾ ಮಠದ ಶ್ರೀಗಳು, ಸಿದ್ದರಬೆಟ್ಟದ ವೀರಭದ್ರ ಶಿವಚಾರ್ಯ ಸ್ವಾಮೀಜಿ ತೆಪ್ಪೋತ್ಸವದಲ್ಲಿ ಭಾಗಿಯಾಗಿ ಆಶೀರ್ವದಿಸಿದರು. ಇನ್ನು ಕಾಶಿಯಿಂದ ಬಂದಿದ್ದ ಪಂಡಿತರು ಗಂಗಾರತಿ ಮಾಡಿದರು. ಈ ವೇಳೆ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರೋ ಕುಂಭಮೇಳದಂತೆ ಮಧುಗಿರಿ ತೆಪ್ಪೋತ್ಸವ ಕಂಗೊಳಿಸಿದೆ ಎಂದು ಸಚಿವ ಪರಮೇಶ್ವರ್‌ ಹಾಡಿ ಹೊಗಳಿದರು.

ಒಟ್ಟಿನಲ್ಲಿ 50 ವರ್ಷದ ಬಳಿಕ ದಂಡಿನಮಾರಮ್ಮ ತೆಪ್ಪೋತ್ಸವ ಅದ್ಧೂರಿಯಾಗಿ ಜರುಗಿದ್ದು, ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು. ದೇವಿ ದಂಡಿನ ಮಾರಮ್ಮ ಈ ನಾಡಿನ ಜನರನ್ನು ಕಾಪಾಡುವಂತೆ ಬೇಡಿಕೊಂಡರು, ಪ್ರತಿ ವರ್ಷ ತೆಪ್ಪೋತ್ಸವ ಹೀಗೆ ನಡೆಯಬೇಕು ಎಂಬ ಮನದಾಸೆಯನ್ನು ಹೇಳಿದರು.

Author:

...
Editor

ManyaSoft Admin

Ads in Post
share
No Reviews