ಪಾವಗಡ:
ಪಾವಗಡ ಪಟ್ಟಣದ ಶ್ರೀಮತಿ, ಶ್ರೀ ವೈ.ಈ ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ ಅಯೋಜನೆ ಮಾಡಲಾಗಿತ್ತು. ಜಾನಪದ ವಾದ್ಯಕ್ಕೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದ್ದು, ಕಾಲೇಜಿನ ಜಾನಪದ ಉತ್ಸವವು ಗ್ರಾಮೀಣ ಸಂಸ್ಕೃತಿಯ ಸಡಗರದಿಂದ ಉಳುಮೆಯ ಹಬ್ಬದಂತೆ ಆಚರಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಾನಪದ ವಿದ್ವಾಂಸ ಸಣ್ಣ ನಾಗಪ್ಪ ಹಾಗೂ ಪ್ರಾಂಶುಪಾಲ ಡಾ.ಎನ್ ಶ್ರೀಧರ್ ಅವರನ್ನು ಎತ್ತಿನಗಾಡಿಯಲ್ಲಿ ಚಳ್ಳಕೆರೆ ಕ್ರಾಸ್‌ನಿಂದ ಮೆರವಣಿಗೆ ಮೂಲಕ ಕಾಲೇಜಿಗೆ ಕರೆತರಲಾಯಿತು. ಮೆರವಣಿಗೆಯಲ್ಲಿ ಡೋಲು, ತಮಟೆ ಸದ್ದಿಗೆ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಕುಣಿದು ಕುಪ್ಪಳಿಸಿದರು.
ಕಾಲೇಜಿನಲ್ಲಿ ಜಾನಪದ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಬಿಳಿ ಶರ್ಟ್, ಪಂಚೆಯಲ್ಲಿ ಮಿಂಚಿದರೆ, ಹುಡುಗಿಯರು ಮಹಿಳಾ ಪ್ರಾಧ್ಯಾಪಕಿಯರು ರೇಷ್ಮೇ ಸೀರೆಯುಟ್ಟಿದ್ದು ಆಕರ್ಷಣಿಯವಾಗಿತ್ತು. ಕಾಲೇಜು ಆವರಣದಲ್ಲಿ ರಾಗಿ, ಭತ್ತ, ಗೋದಿ ಸೇರಿದಂತೆ ವಿವಿದ ಸಿರಿಧಾನ್ಯಗಳಿಂದ ಸಿಂಗಾರಗೊಳಿಸಿ, ಧಾನ್ಯ ಪೂಜೆಯೊಂದಿಗೆ ಜಾನಪದ ಉತ್ಸವ ಆರಂಭವಾಯಿತು. ಗ್ರಾಮೀಣ ಸಂಪ್ರದಾಯದಂತೆ ಹಾಲೋಯ್ಯುವ ಹಬ್ಬ, ಮಾರಮ್ಮನ ಉತ್ಸವ, ಗೌರಿ ಪೂಜೆ ಮುಂತಾದ ಆಚರಣೆಗಳು ನಡೆದಿದ್ದು ದಿನವಿಡೀ ಕಾಲೇಜು ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಇನ್ನು ಕಾಲೇಜಿನಲ್ಲಿ ವೇದಿಕೆ ಕಾರ್ಯಕ್ರಮವನ್ನು ರಾಗಿ ಕಲ್ಲು ಬೀಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಸಣ್ಣ ನಾಗಪ್ಪ ಗ್ರಾಮೀಣ ಜಾನಪದ ಸಂಸ್ಕೃತಿ ಮತ್ತು ಪಾವಗಡದ ಜಾನಪದ ಹಿನ್ನೆಲೆಯನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಎನ್. ಶ್ರೀಧರ್, ಸಾಂಸ್ಕೃತಿಕ ಸಂಚಾಲಕರಾದ ಎ. ಕೆಂಪಯ್ಯ, ಸಹ ಪ್ರಾಧ್ಯಾಪಕರಾದ ಲಿಂಗರಾಜು, ರಾಮಾಂಜಿನಿ, ಗಿರೀಶ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.