ಸಕಲೇಶಪುರ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್ ರಸ್ತೆಯ ದೋಣಿಗಾಲ್ ಬಳಿ ಭೂಕುಸಿತ ಉಂಟಾಗಿದೆ. ದೋಣಿಗಾಲ್ ಬಳಿ ನಾಲ್ಕು ಮಾರ್ಗಗಳ ರಸ್ತೆ ವಿಸ್ತರಣಾ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ, ರಸ್ತೆಯ ಎರಡು ಬದಿಗಳಲ್ಲೂ ಸಹ ಸುಮಾರು ನೂರು ಅಡಿ ಆಳದಲ್ಲಿ 90 ಡಿಗ್ರಿ ತೀವ್ರತೆಯಲ್ಲಿ ಭೂಮಿಯನ್ನು ಬಗೆಯಲಾಗಿತ್ತು. ಈ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಭೂ ಕುಸಿತ ಉಂಟಾಗಿದೆ.
ತಡೆಗೋಡೆಗಳು ಇದ್ದರೂ ಮೇಲ್ಭಾಗದಿಂದ ಮಣ್ಣು ಜೋರಾಗಿ ಕುಸಿಯುತ್ತಿದ್ದು, ಕಾಫಿ, ಸಿಲ್ವರ್ ಮರಗಳು ಹಾಗೂ ಇತರೆ ಮರಗಳು ಮಣ್ಣಿನೊಂದಿಗೆ ರಸ್ತೆಗೆ ಉರುಳಿವೆ. ಬಿರುಗಾಳಿಯ ಜೊತೆಗೆ ಮಳೆಯೂ ಮಿತಿಮೀರಿದ ಪರಿಣಾಮ ಭೂಕುಸಿತದ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.
ವೀಕೆಂಡ್ ಹಿನ್ನಲೆಯಲ್ಲಿ ಈ ಮಾರ್ಗದಲ್ಲಿ ಜನಗಳ ಓಡಾಟ ಹೆಚ್ಚಾಗಿದ್ದು, ಭೂಕುಸಿತದಿಂದಾಗಿ ಸಂಚಾರದಲ್ಲಿ ಅಡಚಣೆ ಉಂಟಾಗಿದೆ. ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ 75 ರ ಬೆಂಗಳೂರು –ಮಂಗಳೂರು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ.