ಕೊರಟಗೆರೆ:
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ತೋಟದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿದ್ದ ದವಸ ಧಾನ್ಯ, ಚಿನ್ನಾಭರಣ ಎಲ್ಲವೂ ಸುಟ್ಟು ಕರಕಲಾಗಿದೆ. ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ದಿನ್ನೆಪಾಳ್ಯದ ರೈತ ತಿಮ್ಮಪ್ಪ ಅವರ ತೋಟದ ಮನೆಯಲ್ಲಿ ಈ ಘಟನೆ ಜರುಗಿದೆ.
ಬೇಸಿಗೆ ಆರಂಭವಾಗಿರೋದರಿಂದ ರೈತ ತಿಮ್ಮಪ್ಪ ಮನೆಯವರು ಎಲ್ಲರೂ ಹೊರಗೆ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿದ್ದು ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ, ಬೆಂಕಿಯ ಕೆನ್ನಾಲಗೆಗೆ ಇಡೀ ಮನೆಯನ್ನೇ ಆವರಿಸಿಕೊಂಡಿದ್ದು ಮನೆಯಲ್ಲಿದ್ದ ಮೂರು ಮೂಟೆ ಕಡಲೆಕಾಯಿ, ಬೇಳೆ, ಮನೆ, ಜಮೀನಿನ ದಾಖಲೆ ಪತ್ರಗಳು, ಆಧಾರ್ ಕಾರ್ಡ್, ರೇಷನ್ ಕಾರ್ಡ್, ರೇಷ್ಮೇ ಮಾರಿರುವ ದುಡ್ಡು, ಚಿನ್ನಭಾರಣ ಎಲ್ಲಾ ಸುಟ್ಟು ಹೋಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಹೊರಗೆ ಇದ್ದಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದು, ಕುಟುಂಬಸ್ಥರು ಕಣ್ಣೀರಾಕುತ್ತಿದ್ದಾರೆ.
ಇನ್ನು ಬೆಂಕಿ ದುರಂತದಲ್ಲಿ ವರ್ಷಾನುಗಟ್ಟಲೆ ಕೂಡಿಟ್ಟಿದ್ದ ದವಸ ಧಾನ್ಯ, ಪಾತ್ರೆ ಎಲ್ಲವೂ ನಾಶವಾಗಿದ್ದು ಊಟಕ್ಕಾಗಿ ಪರದಾಡುವಂತಾಗಿದೆ. ಇದರಿಂದ ರೈತ ತಿಮ್ಮಪ್ಪ, ಪತ್ನಿ, ಮಕ್ಕಳು, ಮೊಮ್ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಹಾಗೂ ಸರ್ಕಾರ ಈ ರೈತನ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಹಾಗೂ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.