ಸಾರಂಗ ಸಂಭ್ರಮ ಕಾರ್ಯಕ್ರಮತುಮಕೂರು
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿರುವ ಸಾರಂಗ ಅಕಾಡೆಮಿಯ ಪ್ರಿಯದರ್ಶಿನಿ ಪಿಯು ಕಾಲೇಜಿನ ವಾರ್ಷಿಕೋತ್ಸವದ ಪ್ರಯುಕ್ತ ಸಾರಂಗ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಆವರಣದಲ್ಲಿ ನಡೆದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಅರ್ಜುನ್ ಯೋಗಿ ಮತ್ತು ಕನ್ನಡ ಕೋಗಿಲೆ ಖ್ಯಾತಿಯ ಗಾಯಕ ಖಾಸೀಮ್ ಅಲಿ ಅವರು ಭಾಗವಹಿಸಿದ್ದರು. ಸಾರಂಗ ಸಂಭ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊರಟಗೆರೆ ತಹಶೀಲ್ದಾರ್ ಮಂಜುನಾಥ್ ರವರು ಮಾತನಾಡಿ ಪ್ರಿಯದರ್ಶಿನಿ ಪಿಯು ಕಾಲೇಜು ಗ್ರಾಮೀಣ ಪ್ರದೇಶದ ಬಡಮಕ್ಕಳ ಪಾಲಿನ ಶೈಕ್ಷಣಿಕ ದಾರಿದೀಪವಾಗಿದೆ. ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಗುಣಮಟ್ಟದ ಶಿಕ್ಷಣ ನೀಡುವುದು ಉಪನ್ಯಾಸಕರ ಪ್ರಮುಖ ಕರ್ತವ್ಯ. ಈ ತಾಲೂಕಿನ ಸಾಕಷ್ಟು ಜನ ಸಾಧಕರು ನಮ್ಮ ದೇಶ ಹಾಗೂ ರಾಜ್ಯದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.
ಸಾರಂಗ ಅಕಾಡೆಮಿ ಅಧ್ಯಕ್ಷ ಡಿ.ಅಜಯ್ ಕುಮಾರ್ ರವರು ಮಾತನಾಡಿ, ತಂದೆ ತಾಯಿ ಮತ್ತು ಶಿಕ್ಷಕರನ್ನು ಗೌರವಿಸುವ ಪಾಠವನ್ನು ಕಾಲೇಜು ಪ್ರತಿನಿತ್ಯ ಮಕ್ಕಳಿಗೆ ಕಲಿಸುತ್ತೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಈ ವರ್ಷವೂ ರಾಜ್ಯದಲ್ಲಿ ಉತ್ತಮ ಅಂಕಗಳಿಸುವಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ ಎಂಬ ನಂಬಿಕೆಯಿದೆ ಅಂತಾ ಹೇಳಿದರು.
ಕಾಲೇಜು ಪ್ರಾಂಶುಪಾಲ ಕೆ.ಎನ್.ರುದ್ರೇಶ್ ರವರು ಮಾತನಾಡಿ, ಉಪನ್ಯಾಸಕರೇ ಕಟ್ಟಿ ಬೆಳೆಸಿದ ಶೈಕ್ಷಣಿಕ ಕಾಲೇಜು ನಮ್ಮ ಹೆಮ್ಮೆಯ ಪ್ರಿಯದರ್ಶಿನಿ. ಪ್ರಥಮ ವರ್ಷವೇ ೪೦೦ಕ್ಕೂ ಅಧಿಕ ದಾಖಲಾತಿ ಪಡೆದ ಕೊರಟಗೆರೆಯ ಏಕೈಕ ಸಂಸ್ಥೆ ನಮ್ಮದು ಎಂದರು. ಬಡಮಕ್ಕಳು ಊಟದಿಂದ ವಂಚಿತರಾದ್ರು ಪರ್ವಾಗಿಲ್ಲ ಆದರೆ ಶಿಕ್ಷಣದಿಂದ ಮಾತ್ರ ವಂಚಿತರಾಗಬಾರದು ಎಂಬ ಧ್ಯೇಯ ನಮ್ಮದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಅರ್ಜುನ್ ಯೋಗಿ, ಹಾಗೂ ಕರ್ನಾಟಕ ಕೋಗಿಲೆ ವಿಜೇತ ಖಾಸೀಮ್ ಅಲಿಂರವರು ತಮ್ಮ ನೃತ್ಯ ಹಾಗೂ ಸಂಗೀತದ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಪೋಷಕರನ್ನು ರಂಜಿಸಿದರು. ಸಂಸ್ಕೃತಿಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಬಳೆ ತೊಡಿಸುವ ಕಾರ್ಯಕ್ರಮವನ್ನು ಆಡಳಿತ ಮಂಡಳಿ ಆಯೋಜಿಸಿತ್ತು. ಬಳೆ ತೊಡಿಸುವಾಗ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಹಾಡು ಹಾಡುವ ಮೂಲಕ ಬಳೆಗಳನ್ನು ಉಪನ್ಯಾಸಕರಿಗೆ ತೊಡಿಸಿ ಸಂಭ್ರಮಪಟ್ಟರು. ಹಾಗೂ ರ್ಯಾಂಕ್ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.