ಕ್ಯಾಮೇನಹಳ್ಳಿ ಕಮನೀಯ ಕ್ಷೇತ್ರದ ದನಗಳ ಜಾತ್ರೆತುಮಕೂರು
ತುಮಕೂರು : ಕೊರಟಗೆರೆ ತಾಲೂಕಿನ ಐತಿಹಾಸಿಕ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಕಮನೀಯ ಕ್ಷೇತ್ರದಲ್ಲಿ ದನಗಳ ಜಾತ್ರೆ ಸಂಕ್ರಾಂತಿ ಹಬ್ಬದ ಮಾರನೇ ದಿನದಿಂದಲೇ ಆರಂಭವಾಗಿದೆ. ದಾವಣಗೆರೆ, ರಾಯಚೂರು, ಬಿಜಾಪುರ, ಧಾರವಾಡ, ಬಳ್ಳಾರಿ, ವಿಜಯಪುರ, ಕಲುಬುರ್ಗಿ, ತುಮಕೂರು ಸೇರಿದಂತೆ ವಿವಿಧ ಭಾಗಗಳಿಂದ ರಾಸುಗಳು ಬಂದು ಈ ಜಾತ್ರೆಗೆ ಸೇರುತ್ತಿವೆ.
ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ದನಗಳ ಜಾತ್ರೆ ಸಂಕ್ರಾಂತಿ ಹಬ್ಬದ ಮಾರನೇ ದಿನದಿಂದ ಆರಂಭವಾಗಿ 15 ದಿನಗಳ ಕಾಲ ನಡೆಯುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ದನಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ನೂರಾರು ಜನ ಈ ಜಾತ್ರೆಗೆ ಬರುತ್ತಾರೆ. ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಹಸುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ರಾಸುಗಳ ಖರೀದಿಗೆ ರೈತರು ಈ ಜಾತ್ರೆಗೆ ಆಗಮಮಿಸುತ್ತಾರೆ.
ಸಂಕ್ರಾಂತಿ ಮಾರನೇ ದಿನದಿಂದ ದನಗಳ ಜಾತ್ರೆ ಪ್ರಾರಂಭಗೊಂಡಿದ್ದು, ಜಾತ್ರೆ ತುಂಬೆಲ್ಲಾ ರೈತರು ರಾಸುಗಳನ್ನು ಕೊಳ್ಳಲು ಹಾಗೂ ಮಾರಲು ಓಡಾಡುತ್ತಿದ್ದಾರೆ. ರಾಜ್ಯದ ಹತ್ತಾರು ಜಿಲ್ಲೆಗಳಿಂದ 4 ಸಾವಿರಕ್ಕೂ ಅಧಿಕ ವಿವಿಧ ತಳಿಯ ರಾಸುಗಳು ಈ ಜಾತ್ರೆಯಲ್ಲಿರುತ್ತವೆ. ಕ್ಯಾಮೇನಹಳ್ಳಿ ಆಂಜನೇಯ ದನಗಳ ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಜೋಡೆತ್ತುಗಳಿಗೆ 40 ಸಾವಿರದಿಂದ 8 ಲಕ್ಷದ ವರೆಗೆ ಬೆಲೆ ಇರುತ್ತದೆ. ಈ ಬಾರಿ ವ್ಯಾಪಾರ ವಹಿವಾಟು ಚುರುಕಾಗಿದೆ ಎಂದು ಜಾತ್ರೆಗೆ ಬಂದಿರುವ ರೈತರು ಅಭಿಪ್ರಾಯಪಟ್ಟಿದ್ದಾರೆ.